ಬೆಂಗಳೂರು, (ಆಕ್ಟೋಬರ್ 17): ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಆಸ್ಪತ್ರೆಗೆ(Hospital) ದಾಖಲಾಗಿದ್ದಾರೆ. ಮೊಣಕಾಲು ನೋವು ತೀವ್ರವಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ವೈದ್ಯರು ಬೊಮ್ಮಾಯಿ ಅವರ ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಇನ್ನು ಇದಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿ, ಬಸವರಾಜ ಬೊಮ್ಮಾಯಿ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಮೊಣಕಾಲಿನ ನೋವಿನಿಂದ ಬಳಲುತ್ತಿದ್ದರು. ಇದೀಗ ನೋವು ತೀವ್ರವಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ನಿಕಟಪೂರ್ವ ಮುಖ್ಯಮಂತ್ರಿಗಳು, ಆತ್ಮೀಯರೂ ಆದ ಶ್ರೀ ಬಸವರಾಜ ಬೊಮ್ಮಾಯಿ ಅವರು ಆದಷ್ಟು ಶೀಘ್ರದಲ್ಲಿ ಸಂಪೂರ್ಣ ಗುಣಮುಖರಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.@BSBommai
— B.S.Yediyurappa (@BSYBJP) October 16, 2023
ಇದಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿ, ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ನಿಕಟಪೂರ್ವ ಮುಖ್ಯಮಂತ್ರಿಗಳು, ಆತ್ಮೀಯರೂ ಆದ ಶ್ರೀ ಬಸವರಾಜ ಬೊಮ್ಮಾಯಿ ಅವರು ಆದಷ್ಟು ಶೀಘ್ರದಲ್ಲಿ ಸಂಪೂರ್ಣ ಗುಣಮುಖರಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕೆಲ ವರ್ಷಗಳಿಂದ ಬೊಮ್ಮಾಯಿಯವರು ತೀವ್ರ ಮಂಡಿನೋವಿನಿಂದ ಬಳಲುತ್ತಿದ್ದರು. ನಡೆದಾಡುವಾಗ ಸಮಸ್ಯೆ ಎದುರಿಸುತ್ತಿದ್ದರು. ಆದರೂ ಸಹ ಅವರು ಕುಂಟುತ್ತಾ ರಾಜಕೀಯ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೊನೆಗೆ ನೋವು ಹೆಚ್ಚಾಗಿದ್ದರಿಂದ ಅವರು ಸಿಎಂ ಸ್ಥಾನದಲ್ಲಿರು ಇರುವಾಗಲೇ ವಿದೇಶಕ್ಕೆ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಒಂದು ವೇಳೆ ಆಪರೇಷನ್ ಮಾಡಿಸಿಕೊಂಡರೇ ಹಲವು ದಿನಗಳ ವಿಶ್ರಾಂತಿ ಅಗತ್ಯವಿರುತ್ತೆ ಎಂದು ಆಪರೇಷನ್ ಮಾಡಿಸಿಕೊಳ್ಳುವುದನ್ನು ಕೈಬಿಟ್ಟಿದ್ದರು. ಬದಲಿಗೆ ಬಸವರಾಜ ಬೊಮ್ಮಾಯಿ ಅವರು ಮಂಡಿ ನೋವಿಗೆ ಆಯುರ್ವೇದ ಚಿಕಿತ್ಸೆ ಸಹ ಪಡೆದುಕೊಂಡಿದ್ದರು. ಮೈಸೂರಿನ ಮೂಲದ ಖ್ಯಾತ ನಾಟಿ ವೈದ್ಯ ಲೋಕೇಶ್ ಟೇಕ್ ಅವರಿಂದ ಚಿಕಿತ್ಸೆ ಪಡೆದುಕೊಂಡಿದ್ದರು.
ಆದ್ರೆ, ಇದೀಗ ಬೆಂಗಳೂರಿನಲ್ಲೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಹಲವು ದಿನಗಳ ಕಾಲ ಅವರಿಗೆ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಅವರು ಸದ್ಯಕ್ಕೆ ರಾಜಕೀಯ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.