ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಿಬಿಎಂಪಿ 2021-22 ರ ತನ್ನ ಆಯವ್ಯಯ ಯಾರಿಗೂ ಹೊರಯಾಗದ ರೀತಿಯಲ್ಲಿ ತೆರಿಗೆ ಹೆಚ್ಚಳವೂ ಮಾಡಿಲ್ಲ. ಹೊಸ ತೆರಿಗೆ ಹೆಚ್ಚಳ ಪ್ರಸ್ತಾಪ ಇಲ್ಲ ಎಂದು ಬಿಬಿಎಂಪಿ ಘೋಷಿಸಿದೆ.
ಶನಿವಾರ ಬಿಬಿಎಂಪಿ ತನ್ನ 2021-22 ರ ಆಯವ್ಯಯ ಅನ್ನು ಆಯುಕ್ತ ಎನ್ ಮಂಜುನಾಥ ಪ್ರಸಾದ್ ಅವರು ನಿರ್ಮಿಸಿ, ನಿರ್ದೇಶಿಸಿ, ಆಡಳಿತಗಾರ ಗೌರವ್ ಗುಪ್ತಾ ಅವರಿಂದ ಅನುಮತಿ ಪಡೆದ ನಂತರ ವಿಶೇಷ ಆಯುಕ್ತ (ಹಣಕಾಸು) ತುಳಸಿ ಮದ್ದಿನೆನಿ ಅವರು ಓದಿದರು. ಮದ್ದಿನೇನಿ ಅವರು ಒಟ್ಟು 9,291 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ.
“ಬೆಂಗಳೂರು ನಗರದ ನಿವಾಸಿಗಳು ಪಾವತಿಸುವ ಆಸ್ತಿ ತೆರಿಗೆಯಿಂದ ಪಾಲಿಕೆಯ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದು , ಕೋವಿಡ್ -19 ರಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ಬಗ್ಗೆ ನಮಗೆಲ್ಲರಿಗೂ ತಿಳಿದಿರುವ ವಿಷಯವಾಗಿರುತ್ತದೆ . ಆದ್ದರಿಂದ ಈ ಸಾಲಿನಲ್ಲಿ ಆಸ್ತಿ ತೆರಿಗೆ ದರವನ್ನು ಹೆಚ್ಚಿಸುತ್ತಿಲ್ಲ. ಆದಾಗ್ಯೂ ಸಹ ನಗರದ ನಾಗರಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ನಮ್ಮ ಸಂಪನ್ಮೂಲ ಕ್ರೋಡೀಕರಣವು ಸುಧಾರಿಸಬೇಕಾಗಿರುತ್ತದೆ,” ಎಂದು ಬಜೆಟ್ಟಿನಲ್ಲಿ ಹೇಳಲಾಗಿದೆ.
ಮುಂದುವರೆದು,” ಆದ್ದರಿಂದ , ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡದೆ ಕೈ ಬಿಟ್ಟು ಹೋಗಿರುವ ಎಲ್ಲಾ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ ಮತ್ತು ಆಸ್ತಿಗಳ ತಪ್ಪು ವಲಯ ವರ್ಗೀಕರಣವನ್ನು ಕಡ್ಡಾಯವಾಗಿ ಸರಿಪಡಿಸಲು ಉದ್ದೇಶಿಲಾಗಿದೆ . ಈಗಾಗಲೇ ತಪ್ಪಾಗಿ ವರ್ಗೀಕರಿಸಿರುವ ಆಸ್ತಿ ಮಾಲೀಕರುಗಳಿಗೆ 78,000 ನೋಟಿಸ್‌ಗಳನ್ನು ನೀಡಲಾಗಿದ್ದು , ಇನ್ನು ಹಲವಾರು ಆಸ್ತಿಗಳ ಗುರುತಿಸುವಿಕೆಯ ಪರಿಶೀಲನೆ ಪ್ರಗತಿಯಲ್ಲಿರುತ್ತದೆ . ಈ ಸಾಲಿನಲ್ಲಿ ಪಾಲಿಕೆಯು ಆಸ್ತಿ ತೆರಿಗೆ ಮೌಲ್ಯ ಮಾಪನದಲ್ಲಿ ಬಂಡವಾಳ ಮೌಲ್ಯ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ . ಇದು ಕೇಂದ್ರ ಸರ್ಕಾರದಿಂದ ಅನುದಾನ ಒದಗಿಸುವ 15 ನೇ ಹಣಕಾಸು ಆಯೋಗದ ಅನುದಾನವನ್ನು ಪಡೆಯಲು ಅತ್ಯಗತ್ಯ ಮತ್ತು ಅವಶ್ಯಕವಾಗಿರುತ್ತದೆ . ನಮ್ಮ ರಾಜ್ಯದಲ್ಲಿ ಬಂಡವಾಳ ಮೌಲ್ಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದ ಏಕೈಕ ಸ್ಥಳೀಯ ಸಂಸ್ಥೆ ಎಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿರುತ್ತದೆ . ಬಂಡವಾಳ ಮೌಲ್ಯ ವ್ಯವಸ್ಥೆ ಜಾರಿಗೆ ತರುವ ಪೂರ್ವಭಾವಿ ಸಿದ್ಧತಾ ಕಾರ್ಯಗಳು ಪ್ರಾರಂಭವಾಗಿರುತ್ತದೆ,” ಎಂದು ಹೇಳಲಾಗಿದೆ.
“ಬಿ ” ವಹಿಯಲ್ಲಿ ಆಸ್ತಿಗಳ ದಾಖಲಿಸುವ ಪದ್ಧತಿಯನ್ನು ರದ್ದುಗೊಳಿಸಲು ಸಿದ್ಧತಾ
ಬೆಂಗಳೂರು ನಗರವು ಹೆಚ್ಚು ಪಾರದರ್ಶಕ ವ್ಯವಸ್ಥೆಯ ಮತ್ತು ಕ್ರಮಬದ್ಧ ಬೆಳವಣಿಗೆಗೆ ಅನುಕೂಲವಾಗುವಂತೆ , ಸರ್ಕಾರದ ಕಂದಾಯ ಇಲಾಖೆಯ ಸಹಕಾರದೊಂದಿಗೆ “ ಬಿ ” ವಹಿಯಲ್ಲಿ ಆಸ್ತಿಗಳ ದಾಖಲಿಸುವ ಪದ್ಧತಿಯನ್ನು ರದ್ದುಗೊಳಿಸಲು ಪೂರ್ವ ಸಿದ್ಧತಾ ಕಾರ್ಯಗಳು ಪ್ರಗತಿಯಲ್ಲಿರುತ್ತದೆ . ಅಗತ್ಯ ಕಾನೂನಾತ್ಮಕ ಪ್ರಕ್ರಿಯೆ ಪೂರ್ಣಗೊಂಡ ನಂತರ ಹೆಚ್ಚಿನ ಮಾಹಿತಿಗಳನ್ನು ನೀಡಲಾಗುವುದು .
ಈ ಸಾಲಿನಲ್ಲಿ ನಾವು ಆಸ್ತಿ ತೆರಿಗೆಯಿಂದ ರೂ.2800.00 ಕೋಟಿ ಹಾಗೂ ಕರಗಳೊಂದಿಗೆ ಒಟ್ಟಾರೆ ರೂ.3500.00 ಕೋಟಿ ಸಂಗ್ರಹದ ಮಹತ್ವಾಕಾಂಕ್ಷೆ ಹಾಗೂ ಸಾಧಿಸಬಹುದಾದ ಗುರಿಯನ್ನು ಹೊಂದಿದ್ದೇವೆ . ಈ ನಿಟ್ಟಿನಲ್ಲಿ ಕಂದಾಯ ವಿಭಾಗದ ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ನಾಗರಿಕರ ಸಹಕಾರದೊಂದಿಗೆ ನಾವು ಗುರಿಯನ್ನು ಸಾಧಿಸುವ ವಿಶ್ವಾಸವಿದೆ . ಆಸ್ತಿ ತೆರಿಗೆ ಸಂಗ್ರಹದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ವಾರ್ಡ್‌ಗಳಲ್ಲಿ ಸಂಗ್ರಹಿಸಿದ ಆಸ್ತಿ ತೆರಿಗೆಯ ಶೇ .1 ರಷ್ಟು ಅನುದಾನವನ್ನು ವಾರ್ಡ್ ಸಮಿತಿಗೆ ಅಗತ್ಯ ಕೆಲಸಗಳನ್ನು ನಿರ್ವಹಿಸುವ ಸಲುವಾಗಿ ನೀಡಲು ಉದ್ದೇಶಿಸಲಾಗಿದೆ . ವಿಧಾನಸಭಾ ಕ್ಷೇತ್ರದ ಸಮಾಲೋಚನ ಸಮಿತಿ ಮಟ್ಟದಲ್ಲಿ ಅನುಮೋದನೆ ಯೊಂದಿಗೆ ಎಲ್ಲಾ ವಾರ್ಡ್‌ಗಳ ಕಾಮಗಾರಿಗಳನ್ನು ಕ್ರೋಢೀಕರಿಸಿ ಅನುಷ್ಟಾನಗೊಳಿಸಲಾಗುತ್ತದೆ .
Budget-Speech-and-ATR-Budget202122ಇ-ಆಸ್ತಿ ತಂತ್ರಾಂಶಕ್ಕೆ ಹೆಚ್ಚಿನ ಒತ್ತು
2021-2022ನೇ ಸಾಲಿನ ಬಿಬಿಎಂಪಿ ಬಜೆಟ್ ಯಾರಿಗೂ ಹೊರಯಾಗದ ರೀತಿಯಲ್ಲಿ ಜನಸ್ನೇಹಿಯಾಗಿದೆ. ತೆರಿಗೆ ಹೆಚ್ಚಳವೂ ಇಲ್ಲ, ಹೊಸ ತೆರಿಗೆ ಹೆಚ್ಚಳ ಪ್ರಸ್ತಾಪ ಇಲ್ಲ. ವಲಯವಾರು ಮಟ್ಟದಲ್ಲಿ ವಾರ್ಡ್ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಆಡಳಿತಾತ್ಮಕ ಅಧಿಕಾರ ವಿಕೇಂದ್ರೀಕರಣಕ್ಕೆ ₹2,000 ಕೋಟಿ ತೆಗೆದಿರಿಸಲಾಗಿದೆ. ಆಸ್ತಿ ತೆರಿಗೆಯ ಶೇ.1ರಷ್ಟು ವಾರ್ಡ್ ಅಭಿವೃದ್ಧಿಗೆ ಮೀಸಲು ಇಡಲಾಗಿದೆ. ಇ-ಆಸ್ತಿ ತಂತ್ರಾಂಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಕಸ ವಿಲೇವಾರಿಗೆ ₹1,622 ಕೋಟಿ ಮೀಸಲು ಇಡಲಾಗಿದೆ. 67 ಹೊಸ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಲಿದೆ. 2021-2022ನೇ ಸಾಲಿನ ಬಿಬಿಎಂಪಿ ಬಜೆಟ್ನಲ್ಲಿ ಸಿಬ್ಬಂದಿ ವೆಚ್ಚಗಳು 1,267.75 ಕೋಟಿ ರೂಪಾಯಿ. ಆಡಳಿತ ವೆಚ್ಚ 250.37 ಕೋಟಿ ರೂಪಾಯಿ. ಬ್ಯಾಂಕ್ ಸಾಲ ಮತ್ತು ಬಡ್ಡಿ ಪಾವತಿ ₹296.87 ಕೋಟಿ. ಕಾರ್ಯಕ್ರಮಗಳ ವೆಚ್ಚ 424.25 ಕೋಟಿ ರೂಪಾಯಿ. ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 2115.63 ಕೋಟಿ ರೂ. ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗೆ ₹4,587.68 ಕೋಟಿ. ಠೇವಣಿ ಮತ್ತು ಕರಗಳ ಮರುಪಾವತಿ ₹344.25 ಕೋಟಿ. ಒಟ್ಟು 9,291 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆಯಾಗಿದೆ.
2021-2022ನೇ ಸಾಲಿನ ಬಿಬಿಎಂಪಿ ಬಜೆಟ್ನಲ್ಲಿ ವಾರ್ಡ್‌ಗಳಲ್ಲಿ ಪಾದಚಾರಿ ಮಾರ್ಗ ಅಭಿವೃದ್ಧಿಗೆ ₹20 ಲಕ್ಷ ರೂ ಅನುದಾನ. ಬೆಂಗಳೂರಿನ ಕೆರೆಗಳ ಸಂರಕ್ಷಣೆಗೆ 10 ಕೋಟಿ ರೂಪಾಯಿ. 2007ರಲ್ಲಿ ಸೇರ್ಪಡೆಯಾದ 110 ಹಳ್ಳಿಗಳ ಅಭಿವೃದ್ಧಿ. ಹಳ್ಳಿಗಳ ಅಭಿವೃದ್ಧಿಗೆ 1,000 ಕೋಟಿ ರೂಪಾಯಿ ಮೀಸಲು. ಟ್ರಾಫಿಕ್ ಕಂಟ್ರೋಲ್‌ಗೆ 12 ಹೈಡೆನ್ಸಿಟಿ ಕಾರಿಡಾರ್ ಅಳವಡಿಕೆ. ಸಬರ್ಬನ್ ರೈಲುಗಳಿಗೆ ಮೆಟ್ರೋ, ಬಿಎಂಟಿಸಿ ಸಂಪರ್ಕ. ಸ್ಮಾರ್ಟ್ ಸಿಟಿ, ಟೆಂಡರ್ ಶ್ಯೂರ್ ಕಾಮಗಾರಿ ಮುಂದುವರಿಕೆ. ಬೆಂಗಳೂರಿನ ಸೌಂದರ್ಯಕ್ಕಾಗಿ 25 ಕೆರೆಗಳ ಪುನಶ್ಚೇತನ. ಖಾತಾ, ಆಸ್ತಿ ತೆರಿಗೆ, ಜನನ ಮರಣ, ಪ್ರಮಾಣ ಪತ್ರ, ಉದ್ಯಮ ಪರವಾನಗಿ, ಕಟ್ಟಡ ನಕ್ಷೆ ಸೇವೆಗೆ ಆನ್‌ಲೈನ್ ವ್ಯವಸ್ಥೆ ಜಾರಿ.
ವಿನಾಕಾರಣ ದುಂದುವೆಚ್ಚಕ್ಕೆ ಬಜೆಟ್‌ನಲ್ಲಿ ಕಡಿವಾಣ. ಶಿಕ್ಷಣ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಪಾರ್ಕ್, ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಅವಕಾಶ. ಉಳಿದ ಹೊಸ ಕಾಮಗಾರಿಗಳಿಗೆ ಅನುಮತಿ ಇಲ್ಲ. ಇನ್ನು, ಆಸ್ತಿ ತೆರಿಗೆ ಹೆಚ್ಚಳ ಇಲ್ಲ. ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು. ಕೈ ಬಿಟ್ಟುಹೋಗಿರುವ ಎಲ್ಲಾ ಆಸ್ತಿಗಳು ತೆರಿಗೆ ವ್ಯಾಪ್ತಿಗೆ. ಕೆ.ಆರ್.ಮಾರ್ಕೆಟ್ ಕಟ್ಟಡ ಅಡಮಾನ ಮುಕ್ತಗೊಂಡಿದೆ. ಕೌನ್ಸಿಲ್ ಕಟ್ಟಡ ನವೀಕರಣಕ್ಕೆ ₹10 ಕೋಟಿ ಅನುದಾನ ನಿಗದಿ. ಆಸ್ತಿ ತೆರಿಗೆಯಿಂದ 2,800 ಕೋಟಿ ರೂಪಾಯಿ. ಕರಗಳಿಂದ 3500 ಕೋಟಿ ರೂ. ಸಂಗ್ರಹದ ನಿರೀಕ್ಷೆ. ಪ್ರಸಕ್ತ ವರ್ಷ 38 ಕೋಟಿ ರೂ. ಬಾಡಿಗೆ ಸಂಗ್ರಹ ನಿರೀಕ್ಷೆ. 116 ಮಾರುಕಟ್ಟೆ ಸಂಕೀರ್ಣ, 5,918 ಅಂಗಡಿಗಳ ಬಾಡಿಗೆಯಿಂದ ವರ್ಷಕ್ಕೆ 23 ಕೋಟಿ ರೂ ಮಾತ್ರ ಬಾಡಿಗೆ ಸಂಗ್ರಹ ಆಗ್ತಿದೆ ಇದನ್ನು ಈ ವರ್ಷ 38 ಕೋಟಿ ನಿರೀಕ್ಷೆ ಮಾಡಲಾಗಿದೆ.