
BBMP Celebrates Karnataka Rajyotsava Day
ಬೆಂಗಳೂರು:
“ಕರ್ನಾಟಕ ರಾಜ್ಯೋತ್ಸವ”ದ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕೇಂದ್ರ ಕಛೇರಿ ಆವರಣದ ಮುಂಭಾಗದಲ್ಲಿ ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಧ್ವಜಾರೋಹಣ ನೆರವೇರಿಸಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದರು.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಧ್ವಜಾರೋಹಣ ರಾಷ್ಟ್ರಗೀತೆ, ನಾಡಗೀತೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯಾದ ನಂತರ ಕ್ರಮವಾಗಿ 05 ಕನ್ನಡ ಗೀತೆಗಳನ್ನು ಹಾಡುವ ಮೂಲಕ ನುಡಿ ನಮನ ಸಲ್ಲಿಸಲಾಯಿತು.

(ಅ) ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು – ಹುಯಿಲಗೊಳ ನಾರಾಯಣರಾಯರು.
(ಆ) ಎಲ್ಲಾದರು ಇರು ಎಂತಾದರು ಇರು – ಕುವೆಂಪು.
(ಇ) ಒಂದೇ ಒಂದೇ ಕರ್ನಾಟಕ ಒಂದೇ – ದ.ರಾ.ಬೇಂದ್ರೆ.
(ಈ) ಹೊತ್ತಿತೋ ಹೊತ್ತಿತೋ ಕನ್ನಡದ ದೀಪ – ಸಿದ್ದಯ್ಯ ಪುರಾಣಿಕ.
(ಉ) ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ – ಚನ್ನವೀರಕಣವಿ.
ಪಾಲಿಕೆ ಕೇಂದ್ರ ಕಛೇರಿಯ ಮುಂಭಾಗದಲ್ಲಿ ಮುಂದೆ ಕೆಂಪು ಮತ್ತು ಹಳದಿ ಬಣ್ಣದಲ್ಲಿ ಕರ್ನಾಟಕದ ನಕ್ಷೆಯ ರಂಗೋಲಿಗಳನ್ನು ಬಿಡಿಸಿ ಕರ್ನಾಟಕ ಸಂಭ್ರಮ-50 “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಘೋಷ ವಾಕ್ಯವನ್ನು ಬರೆಯಲಾಯಿತು.
ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಶಿವಾನಂದ ಕಲ್ಕೆರಿ, ಡಾ. ಕೆ. ಹರೀಶ್ ಕುಮಾರ್, ರೆಡ್ಡಿ ಶಂಕರ ಬಾಬು, ಪ್ರೀತಿ ಗೆಹ್ಲೋಟ್, ಪೂರ್ವ ವಲಯ ಆಯುಕ್ತರಾದ ಸ್ನೇಹಲ್, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರಹ್ಲಾದ್, ಜಂಟಿ ಆಯುಕ್ತರಾದ ಪ್ರತಿಭಾ, ಪಲ್ಲವಿ, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.