ಬೆಂಗಳೂರು:
ನಗರದಲ್ಲಿ ಕೋವಿಡ್ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸೋಂಕು ಹೆಚ್ಚಿರುವ ಪ್ರದೇಶದಲ್ಲಿ ತಪಾಸಣೆ ಹಾಗೂ ಸಂಪರ್ಕ ಪತ್ತೆ ಕಾರ್ಯ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪರಿಸ್ಥಿತಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯಲು ಎಲ್ಲಾ ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಈ ಪೈಕಿ ಹೆಚ್ಚು ಕೋವಿಡ್ ಸೋಂಕು ಕಂಡುಬರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕೋವಿಡ್ ನಿಯಂತ್ರಿಸಬೇಕು ಎಂದರು.
ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲಿಸದಿರುವ ಕಡೆ ದಂಡ ವಿಧಿಸಬೇಕು. ಮದುವೆ ಹಾಗೂ ಇನ್ನಿತರೆ ಸಮಾರಂಭಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಲು ಸೂಚನೆ ನೀಡಬೇಕು. ಕೋವಿಡ್ ಸೋಂಕು ಹೆಚ್ಚಿರುವ ಕ್ಲಸ್ಟರ್‌ಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಟೆಸ್ಟಿಂಗ್, ಟ್ರೇಸಿಂಗ್ ಹಾಗೂ ವ್ಯಾಕ್ಸಿನೇಷನ್ ಕಾರ್ಯ ಸರಿಯಾಗಿ ಮಾಡಬೇಕು ಎಂದು ಹೇಳಿದರು.
ವಿಶೇಷ ಆಯುಕ್ತ ಡಿ.ರಂದೀಪ್ ರವರು ಮಾತನಾಡಿ, ನಗರದಲ್ಲಿ ಪ್ರತಿನಿತ್ಯ ಸರಾಸರಿ 400 ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಕೋವಿಡ್ ಹೆಚ್ಚು ಕಂಡುಬರುತ್ತಿರುವ ಪ್ರದೇಶದಲ್ಲಿ ಹೆಚ್ಚು ಟೆಸ್ಟಿಂಗ್ ಮಾಡಲಾಗುತ್ತಿದೆ. ಜೊತೆಗೆ ಸಂಪರ್ಕ ಪತ್ತೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜೇಂದ್ರ, ವಲಯ ಆರೋಗ್ಯಾಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.