Home ಬೆಂಗಳೂರು ನಗರ ಆಯವ್ಯ ಸಂಬಂಧಿಸಿದಂತೆ ಮಾಜಿ ಮಹಾಪೌರರುಗಳ ಜೊತೆ ಬಿಬಿಎಂಪಿ ಆಯುಕ್ತ, ಆಡಳಿತಗಾರರು ಚರ್ಚೆ

ಆಯವ್ಯ ಸಂಬಂಧಿಸಿದಂತೆ ಮಾಜಿ ಮಹಾಪೌರರುಗಳ ಜೊತೆ ಬಿಬಿಎಂಪಿ ಆಯುಕ್ತ, ಆಡಳಿತಗಾರರು ಚರ್ಚೆ

91
0

ಬೆಂಗಳೂರು:

2021-22ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ಆಡಳಿತಗಾರರು ಗೌರವ್ ಗುಪ್ತಾ ಹಾಗೂ ಅಧಿಕಾರಿಗಳು, ಬಿಬಿಎಂಪಿಯ ಮಾಜಿ ಪಹಾಪೌರರುಗಳ ಸಲಹೆ ಮತ್ತು ಸೂಚನೆಗಳನ್ನು ಪಡೆಯುವ ಸಲುವಾಗಿ ಸಭೆ ಆಯೋಜಿಸಲಾಗಿತ್ತು.

ಈ ವೇಳೆ ಮಾಜಿ ಮಹಾಪೌರರುಗಳಾದ ಲಕ್ಕಣ್ಣ, ಪದ್ಮಾವತಿ ಗಂಗಾಧರ ಗೌಡ, ಹುಚ್ಚಪ್ಪ, ಎಂ.ರಾಮಚಂದ್ರಪ್ಪ, ಕೆ.ಚಂದ್ರಶೇಖರ್, ಪಿ.ಆರ್.ರಮೇಶ್, ಮಮ್ತಾಜ್ ಬೇಗಂ, ಎಸ್.ಕೆ.ನಟರಾಜ್, ಬಿ.ಎಸ್.ಸತ್ಯನಾರಾಯಣ, ಬಿ.ಎನ್.ಮಂಜುನಾಥ ರೆಡ್ಡಿ, ಜಿ.ಪದ್ಮಾವತಿ, ಗಂಗಾಂಬಿಕೆ ಮಲ್ಲಿಕಾರ್ಜುನ್ ಮತ್ತು ವಿಶೇಷ ಆಯುಕ್ತರುಗಳಾದ ಡಿ.ರಂದೀಪ್, ತುಳಸಿ ಮದ್ದಿನೇನಿ, ಬಸವರಾಜು, ರಾಜೇಂದ್ರ ಚೋಳನ್ ಉಪಸ್ಥಿತರಿದ್ದರು.

ನಗರದಲ್ಲಿ ಪಾಲಿಕೆ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು 2021-22ನೇ ಸಾಲಿನ ಆಯವ್ಯಯವನ್ನು ಮಂಡಿಸಬೇಕಿದೆ. ಪಾಲಿಕೆಗೆ ಬರುವ ಆದಾಯಕ್ಕನುಗುಣವಾಗಿ ಆಯವ್ಯಯ ಮಂಡಿಸಿ ರಸ್ತೆ, ಚರಂಡಿ, ಘನತ್ಯಾಜ್ಯ ನಿರ್ಣಹಣೆ, ಬೀದಿ ದೀಪ ನಿರ್ವಹಣೆಗೆ ಸೇರಿದಂತೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಈ ಪೈಕಿ ಇಂದು ಮಾಜಿ ಮಹಾಪೌರರಿಗಳಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆಯಲು ಇಂದು ಸಭೆ ಕರೆದಿದ್ದು, ತಮ್ಮ ಅಮೂಲ್ಯವಾದ ಸಲಹೆ ಮತ್ತು ಸೂಚನೆಗಳನ್ನು ನೀಡುವಂತೆ ಆಡಳಿತಗಾರರು ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಮಹಾಪೌರರುಗಳಲ್ಲಿ ಕೋರಿದರು.

ಮೊದಲಿಗೆ ಮಾಜಿ ಮಹಾಪೌರರು ಲಕ್ಕಣ್ಣನವರು ಮಾತನಾಡಿ, ಪಾಲಿಕೆಯ ವಿವಿಧ ಮುಂದುವರೆದ ಕಾಮಗಾರಿಗಳಿಗೆ ಮತ್ತು ಕಾಮಗಾರಿಗಳ ಬಾಕಿ ಬಿಲ್ ಮೊತ್ತವನ್ನು ಪಾವತಿಸಲು ಅನುದಾನ ನಿಗಧಿ ಮಾಡಿ, ಪಾಲಿಕೆಗೆ ಹೆಚ್ಚುವರಿ ಹೊರೆಯಾಗದಂತೆ ಬಜೆಟ್ ಮಂಡಿಸಲು ಸಲಹೆ ನೀಡಿದರು. ಜೊತೆಗೆ ಬೆಂಗಳೂರು ನಗರವೂ ಬೃಹದಾಕಾರವಾಗಿ ಬೆಳೆದಿದ್ದು, ಅಕ್ಕಪಕ್ಕದ ಉಪನಗರಗಳ ಅಭಿವೃದ್ಧಿಗೆ ಮನ್ನಣೆ ನೀಡಿ ಬೆಂಗಳೂರಿನ ಮೇಲಿರುವ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಿಸಿದರು.

ಮಾಜಿ ಮಹಾಪೌರರು ಪದ್ಮಾವತಿ ಗಂಗಾಧರ್‌ಗೌಡ ರವರು ಮಾತನಾಡಿ, ಪಾಲಿಕೆಯ ಆದಾಯಕ್ಕನುಗುಣವಾಗಿ ಆಯವ್ಯಯ ಮಂಡಿಸಿ ಯೋಜನೆಗಳನ್ನು ನಿಗಧಿತ ಸಮಯದಲ್ಲಿ ಅನುಷ್ಠಾನಗೊಳಿಸುವಂತೆ ಸಲಹೆ ನೀಡಿದರು.

ಮಾಜಿ ಮಹಾಪೌರರು ಹುಚ್ಚಪ್ಪನವರು ಮಾತನಾಡಿ, ಪಾಲಿಕೆಯ ಆಯವ್ಯಯದಲ್ಲಿ ನಿರ್ವಹಣೆ ಕಾಮಗಾರಿಗಳಿಗೆ ಮಾತ್ರ ಒತ್ತು ನೀಡಿ, ಅಭಿವೃದ್ಧಿ ಕಾಮಗಾರಿಗಳನ್ನು ಅತೀ ಅವಶ್ಯಕತೆ ಇದ್ದಲ್ಲಿ ಮಾತ್ರವೇ ಕೈಗೊಳ್ಳುವಂತೆ ಸಲಹೆ ನೀಡಿದರು. ಜೊತೆಗೆ ಸಾರ್ವಜನಿಕರಿಗೆ ಹೆಚ್ಚುವರಿ ತೆರಿಗೆಯನ್ನು ವಿಧಿಸದೇ ಇರುವ ಸಂಪನ್ಮೂಲವನ್ನೆ ಕ್ರೂಢಿಕರಿಸುವಂತೆ ಅಭಿಪ್ರಾಯಿಸಿದರು.

ಮಾಜಿ ಮಹಾಪೌರರು ಎಂ ರಾಮಚಂದ್ರಪ್ಪ ರವರು ಮಾತನಾಡಿ, ಪಾಲಿಕೆಯ ರಸ್ತೆಗಳ ಇತಿಹಾಸವನ್ನು ತಯಾರಿಸಿ ಪ್ರಚುರಪಡಿಸುವಂತೆ ಮನವಿ ಮಾಡಿದರು. ಜೊತೆಗೆ ಕೋವಿಡ್-19ರಿಂದ ಜನರು ಆರ್ಥಿಕ ತೊಂದರೆಗೆ ಸಿಲುಕಿದ್ದು, ಯಾವುದೇ ರೀತಿಯ ಹೆಚ್ಚುವರಿ ತೆರಿಗೆ / ಕರವನ್ನು ವಿಧಿಸಬಾರದೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.

BBMP Commissioner administrators holds meeting with former mayors regarding civic budget

ಮಾಜಿ ಮಹಾಪೌರರು ಕೆ.ಚಂದ್ರಶೇಖರ್ ರವರು ಮಾತನಾಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯು ಸುಮಾರು 800 ಚ.ಕಿಮೀ ಇದ್ದು, ಪಾಲಿಕೆಯು ಎಲ್ಲಾ ಪ್ರದೇಶಗಳಿಗೂ ರಸ್ತೆ, ಚರಂಡಿ ಸೌಕರ್ಯ ನೀಡಿದ್ದರೂ ಸಹ ಅಭಿವೃದ್ಧು ಶುಲ್ಕ ಮತ್ತು ಸ್ವತ್ತುಗಳ ಎ-ಖಾತೆ ವರ್ಗಾವಣೆ ಮಾಡಿದ್ದಲ್ಲಿ ಸಂಪನ್ಮೂಲ ಕ್ರೂಢಿಕರಣವಾಗುವುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜೊತೆಗೆ ಅಂತರಾಷ್ಟ್ರೀಯ ಮಟ್ಟದ ನಗರವಾಗಿರುವ ಬೆಂಗಳೂರಿನಲ್ಲಿ ಉನ್ನತ ಸಂಚಾರ ನಿರ್ವಹಣೆ ಯೋಜನೆಯನ್ನು ರೂಪಿಸಲು ಸಲಹೆ ನೀಡಿದರು.

ಮಾಜಿ ಮಹಾಪೌರರು ಪಿ.ಆರ್.ರಮೇಶ್ ರವರು ಮಾತನಾಡಿ, ಬೆಂಗಳೂರಿನ ಪಾರಂಪರಿಕೆ ಕಟ್ಟಡಗಳನ್ನು ಸಂರಕ್ಷಿಸುವುದು ಅವಶ್ಯಕವಾಗಿದ್ದು, ಪ್ರಸಕ್ತ ಆಯವ್ಯಯದಲ್ಲಿ ಈ ಬಗ್ಗೆ ಒತ್ತು ನೀಡುವಂತೆ ಸಲಹೆ ನೀಡಿದರು. ಜೊತೆಗೆ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಪರಿಸರವಾದಿಗಳು ಮತ್ತು ಸ್ವಯಂಸೇವಕರುಗಳನ್ನು ಗಣನೆಗೆ ತೆಗೆದುಕೊಂಡರೆ ಉತ್ತಮವಾಗಿ ಕಸ ನಿರ್ವಹಣೆ ಮಾಡಬಹುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಜಿ ಮಹಾಪೌರರು ಮಮ್ತಾಜ್ ಬೇಗಂ ರವರು ಮಾತನಾಡಿ, ಪ್ರತಿ ವರ್ಷ ಪಾಲಿಕೆಯ ಆಡಳಿತ ವರದಿ ಮತ್ತು ಆಡಿಟ್ ವರದಿಗಳನ್ನು ಪ್ರಚುರಪಡಿಸಲು ಮನವಿ ಮಾಡಿದರು. ಜೊತೆಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡುವಂತೆ ಸಲಹೆ ನೀಡಿದರು.

ಮಾಜಿ ಮಹಾಪೌರರು ಮಂಜುನಾಥ ರೆಡ್ಡಿ ರವರು ಮಾತನಾಡಿ, ಪಾಲಿಕೆಯ ಸಂಪನ್ಮೂಲ ಕ್ರೂಢಿಕರಣ ಪ್ರಮುಖವಾಗಿದ್ದು, ಎ-ಖಾತೆ ಆಗದೇ ಇರುವ ಅನೇಕ ಸ್ವತ್ತುಗಳನ್ನು ಗುರುತಿಸಿ ಎ-ಖಾತೆಗೆ ವರ್ಗಾಯಿಸಲು ಮತ್ತು ಅನವಶ್ಯಕ ಕಾಮಗಾರಿಗಳ ಮೇಲೆ ಹಣ ಪೋಲು ಮಾಡುವುದನ್ನು ತಪ್ಪಿಸಿ ಅತೀ ಅವಶ್ಯಕ ಕಾಮಗಾರಿಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಕಾಮಗಾರಿಗಳ ಯೋಜನಾ ವರದಿ ಸಿದ್ದಪಡಿಸುವಾಗ ಈ ಬಗ್ಗೆ ಕ್ರಮವಹಿಸುವಂತೆ ತಿಳಿಸಿದರು.

ಮಾಜಿ ಮಹಾಪೌರರು ಎಸ್.ಕೆ.ನಟರಾಜ್ ರವರು ಮಾತನಾಡಿ, ಹೊಸ ವಲಯಗಳಲ್ಲಿ ಬರುವ ಆಸ್ತಿಗಳು ಪಾಲಿಕೆ ಸರಿಯಾಗಿ ತೆರಿಗೆ ಹಾಗೂ ಸುಧಾರಣಾ ಶುಲ್ಕ ಪಾವತಿಸುತ್ತಿಲ್ಲ. ಈ ಪೈಕಿ ಅದನ್ನು ಸರಿಯಾಗಿ ಪರಿಶೀಲನೆ ಮಾಡಿ ತೆರಿಗೆ ಸಂಗ್ರಹಿಸಬೇಕು. ಮತ್ತು ಬೃಹತ್ ನೀರುಗಾಲುವೆಗಳನ್ನು ಶೇ.100 ರಷ್ಟು ಅಭಿವೃದ್ಧಿಪಡಿಸಬೇಕು ಎಂದು ಅಭಿಪ್ರಾಯಿಸಿದರು.

ಮಾಜಿ ಮಹಾಪೌರರು ಜಿ.ಪದ್ಮಾವತಿ ರವರು ಮಾತನಾಡಿ, ಪಾಲಿಕೆಯಲ್ಲಿ ಆದಾಯಕ್ಕಿಂತ ಹೆಚ್ಚಾಗಿ ಆಯವ್ಯವನ್ನು ಮಂಡನೆ ಮಾಡಲಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಮಾತ್ರ ನಿಗದಿತ ಸಮಯದಲ್ಲಿ ಆಗುತ್ತಿಲ್ಲ. ಈ ಪೈಕಿ ಆದಾಯಕ್ಕನುಗುಣವಾಗಿ ಆಯವ್ಯಯ ಮಂಡಿಸಿ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ಮಾಜಿ ಮಹಾಪೌರರು ಬಿ.ಎಸ್.ಸತ್ಯನಾರಾಯಣ ರವರು ಮಾತನಾಡಿ, ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡುವುದು, ಸಂಘ ಸಂಸ್ಥೆಗಳಿಗೆ ಅನುದಾನ ಮೀಸಲಿಡುವುದು ಹಾಗೂ ಶಾಲಾ-ಕಾಲೇಜು ಹಾಗೂ ಆಸ್ಪತ್ರೆಗಳಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲು ಸಲಹೆ ನೀಡಿದರು. ಜನಪ್ರತಿನಿಧಿಗಳು ಇರುವಾಗ ಬಡವರ್ಗದ ಜನರಿಗೆ ವೈದ್ಯಕೀಯ ಬಿಲ್ ನೀಡಲಾಗುತ್ತಿತ್ತು. ಅದೇ ರೀತಿ ಆಡಳಿತಗಾರರ ಸಮಯದಲ್ಲೂ ಬಡವರ್ಗದ ಜನರಿಗೆ ವೈದ್ಯ ನೆರವು ನೀಡಬೇಕೆಂದು ಸಲಹೆ ನೀಡಿದರು. ಜೊತೆಗೆ ನಮ್ಮ ಬೆಂಗಳೂರು ನಮ್ಮ ಕೊಡುಗೆ ಕಾರ್ಯಕ್ರಮದಡಿಯಲ್ಲಿ ಅನೇಕ ಸಂಸ್ಥೆಗಳು ವಿವಿಧ ಕ್ಷೇತ್ರಗಳಲ್ಲಿ ಪಾಲಿಕೆಯೊಂದಿಗೆ ಕೈಜೋಡಿಸಿದ್ದು, ಈ ಕಾರ್ಯಕ್ರಮವನ್ನು ಮುಂದುವರೆಸುವಂತೆ ಸಲಹೆ ನೀಡಿದರು.

ಮಾಜಿ ಮಹಾಪೌರರು ಗಂಗಾಂಬಿಕೆ ಮಲ್ಲಿಕಾರ್ಜುನ್ ರವರು ಮಾತನಾಡಿ, ಪಾಲಿಕೆಯಲ್ಲಿ ಸಂಪನ್ಮೂಲ ಸೋರಿಕೆಯಾಗುತ್ತಿರುವ ಬಗ್ಗೆ ಗಮನಹರಿಸಿ, ಟೋಟಲ್ ಸ್ಟೇಷನ್ ಸರ್ವೇ ನಡೆಸುವುದು, ತೆರಿಗೆ ಪಾವತಿಯಿಂದ ತಪ್ಪಿಸಿಕೊಂಡಿರುವ ಸ್ವತ್ತುಗಳನ್ನು ಗುರುತಿಸುವುದು, ಎ-ಖಾತೆ ವರ್ಗಿಕರಣ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದರು. ಜೊತೆಗೆ ಉದ್ಯಾನವನಗಳು, ಇ-ಟಾಯ್ಲೆಟ್‌ಗಳ ನಿರ್ವಹಣೆಗೆ ಅನುದಾನ ಒದಗಿಸಿ, ಅವಶ್ಯಕವಾಗಿರುವ ತುರ್ತು ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲು ಮತ್ತು ವಿವಿಧ ಸಂಸ್ಥೆಗಳ ಸಿ.ಎಸ್.ಆರ್ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಅಭಿಪ್ರಾಯ ನೀಡಿದರು.

LEAVE A REPLY

Please enter your comment!
Please enter your name here