
BBMP contractor meets HD Kumaraswamy over delay in payment
ಬೆಂಗಳೂರು:
ಕಳೆದ 26 ತಿಂಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ತಾವು ಮಾಡಿರುವ ಕಾಮಗಾರಿಗಳ ಬಾಕಿ ಬಿಲ್ ಪಾವತಿ ಮಾಡದಿರುವ ಬಗ್ಗೆ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯನಿರತ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಅವರ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಅವರನ್ನು ಭೇಟಿಯಾದ ಗುತ್ತಿಗೆದಾರರು, ಪಾಲಿಕೆಯ ಮುಖ್ಯ ಆಯುಕ್ತರು ಬಿಲ್ ಪಾವತಿಗೆ ಮೀನಾಮೇಷ ಎಣಿಸುತ್ತಿದ್ದಾರೆ. ಬಿಲ್ ಬಾಕಿ ಉಳಿಸಿಕೊಂಡು, ಈಗ ತನಿಖೆ ಆಗಬೇಕು ಅಂತಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತರು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಈಗಾಗಲೇ ಹಲವು ಗುತ್ತಿಗೆದಾರರು ದಯಾಮರಣ ಕೋರಿದ್ದಾರೆ. ಮಂಗಳೂರಿನಲ್ಲಿ ಒಬ್ಬ ಗುತ್ತಿಗೆದಾರ, ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಪಾಲಿಕೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಅವರು ಮಾಜಿ ಮುಖ್ಯಮಂತ್ರಿಗಳ ಮುಂದೆ ಹೇಳಿಕೊಂಡರು.

ಅವರ ಅಹವಾಲು ಆಲಿಸಿದ ಕುಮಾರಸ್ವಾಮಿ ಅವರು; ಈ ಬಗ್ಗೆ ಸರಕಾರದ ಮೇಲೆ ಒತ್ತಡ ತರುತ್ತೇನೆ. ನಿಮ್ಮ ಬಾಕಿ ಹಣ ತಡೆ ಹಿಡಿಯುವುದು ಸರಿಯಲ್ಲ. ಹಣ ಬಿಡುಗಡೆ ಮಾಡದಿದ್ದರೆ ನಿಮ್ಮ ಜತೆ ನಾನು ಧರಣಿ ಕೂರುತ್ತೇನೆ. ನೀವ್ಯಾರೂ ಅಂಜಬೇಕಿಲ್ಲ ಎಂದು ಭರವಸೆ ನೀಡಿದರು.
ಅಲ್ಲದೆ, ಗುತ್ತಿಗೆದಾರರು ನೀಡಿದ ಎಲ್ಲ ದಾಖಲೆಗಳನ್ನು ಮಾಜಿ ಮುಖ್ಯಮಂತ್ರಿ ಅವರು ಪರಿಶೀಲನೆ ಮಾಡಿದರಲ್ಲದೆ; ದುಡಕಬೇಡಿ, ನಿಮ್ಮ ಪರ ನಾನು ನಿಲ್ಲುತ್ತೇನೆ ಎಂದು ದೈರ್ಯ ತುಂಬಿದರು.