Home ಬೆಂಗಳೂರು ನಗರ BBMP | ಮಳೆಗಾಲದಲ್ಲಿ ವಿಪತ್ತು ನಿರ್ವಹಣೆಗಾಗಿ ಪ್ರತಿ ವಾರ್ಡ್ ಗೆ ಒಬ್ಬ ಇಂಜಿನಿಯರ್ ಗೆ ಜವಾಬ್ದಾರಿ...

BBMP | ಮಳೆಗಾಲದಲ್ಲಿ ವಿಪತ್ತು ನಿರ್ವಹಣೆಗಾಗಿ ಪ್ರತಿ ವಾರ್ಡ್ ಗೆ ಒಬ್ಬ ಇಂಜಿನಿಯರ್ ಗೆ ಜವಾಬ್ದಾರಿ ವಹಿಸಿ: ರಾಕೇಶ್ ಸಿಂಗ್

38
0
BBMP | Designate one engineer per ward for disaster management during monsoon: BBMP Administrator Rakesh Singh
BBMP | Designate one engineer per ward for disaster management during monsoon: BBMP Administrator Rakesh Singh

ಬೆಂಗಳೂರು:

ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನೂ 2-3 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯಿದ್ದು, ಈ ಕೂಡಲೆ ವಿಪತ್ತು ನಿರ್ವಹಣೆಗಾಗಿ ಪ್ರತಿ ವಾರ್ಡ್ನಲ್ಲೂ ಒಬ್ಬ ಇಂಜಿನಿಯರ್ ಗೆ ಜವಾಬ್ದಾರಿ ವಹಿಸಲು ಆಡಳಿತಾಧಿಕಾರಿಯಾದ ಶ್ರೀ ರಾಕೇಶ್ ಸಿಂಗ್ ರವರು ಎಲ್ಲಾ ವಲಯ ಆಯುಕ್ತರಿಗೆ ಸೂಚನೆ ನೀಡಿದರು.

ಬೆಂಗಳೂರಿನ ವಿವಿಧೆಡೆ ನಿನ್ನೆ ರಾತ್ರಿ ಹಲವು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಇಂದು ವರ್ಚ್ಯುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಪತ್ತು ನಿರ್ವಹಣೆ, ರಸ್ತೆ ಗುಂಡಿ, ಕಸದ ಸಮಸ್ಯೆ, ಪಾದಚಾರಿ ಮಾರ್ಗ ದುರಸ್ತಿಪಡಿಸುವ ಸಲುವಾಗಿ ಪ್ರತಿ ವಾರ್ಡ್ ನಲ್ಲೂ ಪ್ರತ್ಯೇಕವಾಗಿ ಒಬ್ಬೊಬ್ಬ ಇಂಜಿನಿಯರ್ ಗೆ ಜವಾಬ್ದಾರಿ ನೀಡಲು ಸೂಚಿಸಿದರು.

ಮೆಟ್ರೋ, ಬೆಸ್ಕಾಂ, ಜಲಮಂಡಳಿ ಕೆಲಸ ನಡೆಯುವ ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಸಂಬಂಧಪಟ್ಟ ಇಲಾಖೆಗಳಿಗೆ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಎಲ್ಲಾದರು ಸಮಸ್ಯೆ ಇದ್ದರೆ ಅದಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿ ನಂತರ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

BBMP Designate one engineer per ward for disaster management during monsoon BBMP Administrator Rakesh Singh and Tushar Giri Nath

ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಮಾತನಾಡಿ, ನಗರದಲ್ಲಿ ಇನ್ನೂ 2 ರಿಂದ 3 ದಿನಗಳವರೆಗೆ ಮಳೆ ಬೀಳುವ ಮುನ್ಸೂಚನೆ ಇರುವುದರಿಂದ ಮಳೆಹಾನಿ ತಡೆಗೆ ಎಲ್ಲಾ ಅಧಿಕಾರಿಗಳು ಸಜ್ಜಾಗಿರುವಂತೆ ಸೂಚಿಸಿದರು.

ನಗರದಲ್ಲಿ ಜೋರು ಮಳೆಯಾಗುವ ಸಮಯದಲ್ಲಿ ರಸ್ತೆಗಳ ಮೇಲೆ ಹೆಚ್ಚು ನೀರು ನಿಂತು ವಾಹನಗಳ ಸಂಚಾರಕ್ಕೆ ಹೆಚ್ಚು ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಮೇಲೆ ಬೀಳುವ ನೀರು ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ಶೋಲ್ಡರ್ ಡ್ರೈನ್ ಗಳ ಬಳಿ ಸ್ವಚ್ಚತೆ ಕಾಪಾಡಲು ಸೂಚಿಸಿದರು.

ಮೆಟ್ರೋ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಅಳವಡಿಸಿರುವ ತಾತ್ಕಾಲಿಕ ಬ್ಯಾರಿಕೇಡ್ ಗಳಿಂದ ಕೆಲವೆಡೆ ಮಳೆ ನೀರು ನಿಲ್ಲುತ್ತದೆ. ಇದರಿಂದ ವಾಹನ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗಲಿದ್ದು, ಮೆಟ್ರೊ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಇರುವ ಸಮಸ್ಯೆಯನ್ನು ಬಗೆಹರಿಸಿಕೊಂಡು ನೀರು ನಿಲ್ಲದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರ್ವೀಸ್ ರಸ್ತೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮಳೆಯಾಗುವ ವೇಳೆ ಅರಣ್ಯ ವಿಭಾಗದ ತಂಡಗಳು ಸದಾ ಸನ್ನದ್ಧರಾಗಿರಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಜಲಾವೃತವಾಗುವ ಸ್ಥಳಗಳಲ್ಲಿ ಪಂಪ್ ಗಳನ್ನಿಟ್ಟು ನೀರು ತೆರವುಗೊಳಿಸಬೇಕು. ರಸ್ತೆ ಬದಿ ಚರಂಡಿ ಹಾಗೂ ರಾಜಕಾಲುವೆಗಳಲ್ಲಿ ಹೂಳನ್ನು ಕಾಲಕಾಲಕ್ಕೆ ತೆರವುಗೊಳಿಸುತ್ತಿರಬೇಕು. ತೆರವುಗೊಳಿಸಿದ ಹೂಳನ್ನು ಕೂಡಲೆ ಸ್ಥಳದಿಂದ ತೆರವು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮನೆಗಳಿಗೆ ನೀರು ನುಗ್ಗಿರುವ ಪಟ್ಟಿ ಸಿದ್ದಪಡಿಸಿ:

ನಗರದಲ್ಲಿ ನಿನ್ನೆ ಮಳೆಯಾದ ವೇಳೆ ಆಯಾ ವಲಯದಲ್ಲಿ ಎಷ್ಟು ಮನೆಗಳಿಗೆ ನೀರು ನುಗ್ಗಿದೆ ಎಂಬುದನ್ನು ಗುರುತಿಸಿ ಪರಿಹಾರ ನೀಡುವ ಕೆಲಸ ಮಾಡಬೇಕು. ಈ ಸಂಬಂಧ ಯಾವ ವಲಯದಲ್ಲಿ ಎಷ್ಟು ಮನೆಗಳಿಗೆ ನೀರು ನುಗ್ಗಿದೆ ಎಂಬ ಪಟ್ಟಿಯನ್ನು ಸಿದ್ದಪಡಿಸಲು ಆಯಾ ವಲಯ ಆಯುಕ್ತರಿಗೆ ಸೂಚನೆ ನೀಡಿದರು.

ಬೆಳ್ಳಂದೂರು/ವರ್ತೂರು ಕೆರೆಯಲ್ಲಿ ಅಳವಡಿಸಿರುವ ಸ್ಲೂಯಿಸ್ ಗೇಟ್ ತೆಗೆಯಲು ಸೂಚನೆ:

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ ಬೆಳ್ಳಂದೂರು ಹಾಗೂ ವರ್ತೂರು ಕೆರೆಯ ಸ್ಲೂಯಿಸ್ ಗೇಟ್ ಗಳನ್ನು ಕೂಡಲೇ ತೆಗೆದು ನೀರನ್ನು ಹೊರಬಿಡಲು ಬಿಡಿಎ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಡಳಿತಗಾರರಾದ ರಾಕೇಶ್ ಸಿಂಗ್ ರವರು ಸಭೆಯಲ್ಲಿ ತಿಳಿಸಿದರು.

ಅಗ್ನಿಶಾಮಕ/ಎಸ್.ಡಿ.ಆರ್.ಎಫ್ ಸಹಾಯ:

ಮಳೆಗಾಲದ ವೇಳೆ ಪಾಲಿಕೆಯ ಜೊತೆ ಅಗ್ನಿ ಶಾಮಕ ಇಲಾಖೆ, ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ಇಲಾಖೆಗಳು ಕೈಜೋಡಿಸಲಿದ್ದಾರೆ. ಈ ಸಂಬಂಧ ಆಯಾ ವಲಯ ಆಯುಕ್ತರು ಸದರಿ ಇಲಾಖೆಗಳ ಜೊತೆ ನಿತ್ಯ ಸಂಪರ್ಕದಲ್ಲಿದ್ದು, ತುರ್ತು ಪರಿಸ್ಥಿತಿಯ ವೇಳೆ ಸದರಿ ಇಲಾಖೆಗಳ ಸಹಾಯ ಪಡೆದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ:

ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಬೇಕು. ರಸ್ತೆಗುಂಡಿ ಮುಚ್ಚಲು ಟೆಂಡರ್ ಪ್ರಕ್ರಿಯೆ ನಡೆಯದಿದ್ದರೆ ಕೂಡಲೆ ಟೆಂಡರ್ ಕರೆದು ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಮಳೆಗಾಲದ ವೇಳೆ ಕೋಲ್ಡ್ ಮಿಕ್ಸ್ ಅನ್ನು ಬಳಸಿ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಎಲ್ಲಾ ವಲಯ ಆಯುಕ್ತರು, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಅಗ್ನಿ ಶಾಮಕ ಇಲಾಖೆ, ಎನ್.ಡಿ.ಆರ್.ಎಫ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here