ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೌಕರರ ಸಹಕಾರ ಸಂಘ ನಿಯಮಿತ ತನ್ನ 112ನೇ ಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ನಗರದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ವಿಜೃಂಭಣೆಯಿಂದ ಆಯೋಜಿಸಿತು. ಈ ಸಂದರ್ಭದಲ್ಲಿ ಬಿಬಿಎಂಪಿ ಮತ್ತು ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ವ್ಯಾಪ್ತಿಯ ಸಾಧಕ ಅಧಿಕಾರಿಗಳು ಹಾಗೂ ನೌಕರರಿಗೆ ‘ಸಾಲು ಮರದ ತಿಮ್ಮಕ್ಕ’ ಪ್ರಶಸ್ತಿ ಪ್ರದಾನಿಸಲಾಯಿತು.
ಕಾರ್ಯಕ್ರಮಕ್ಕೆ ಹಿರಿಯ ನಟಿಯರಾದ ಶ್ರೀಮತಿ ಲಕ್ಷ್ಮಿ, ಶ್ರೀಮತಿ ವಿನಯಪ್ರಸಾದ್, ಸಹಾಯಕ ಆಯುಕ್ತ ಗಿರೀಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಶಡಕ್ಷರಿ, ಸಹಕಾರ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್, ಉಪಾಧ್ಯಕ್ಷ ಕೆ.ಜಿ. ರವಿ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು.
ಸಮಾರಂಭದಲ್ಲಿ ಮಾತನಾಡಿದ ನಟಿ ಲಕ್ಷ್ಮಿ, ಸಾರ್ವಜನಿಕರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು. “ನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುತ್ತಾರೆ. ಕಸ ಬಿಸಾಡುವವರ ಕೈಯಲ್ಲೇ ಕಸ ಎತ್ತುವ ಕೆಲಸ ಮಾಡಿಸಿದಾಗ ಪೌರ ಕಾರ್ಮಿಕರು ಅನುಭವಿಸುವ ಕಷ್ಟ ಅರ್ಥವಾಗುತ್ತದೆ,” ಎಂದು ಹೇಳಿದರು. ಒತ್ತಡರಹಿತ ಜೀವನ, ಉತ್ತಮ ಆಹಾರ ಸೇವನೆ, ಮನಸ್ಸಿನ ಸೌಂದರ್ಯ ಮತ್ತು ಪ್ರಕೃತಿಯ ಮಹತ್ವದ ಕುರಿತೂ ಅವರು ಮಾತನಾಡಿದರು.

ಸಹಾಯಕ ಆಯುಕ್ತ ಗಿರೀಶ್ ಅವರು, ಸಂಕಷ್ಟದ ಸಂದರ್ಭಗಳಲ್ಲಿ ನೌಕರರಿಗೆ ಸಹಕಾರ ಸಂಘ ನೆರವಾಗುತ್ತಿದೆ ಎಂದು ತಿಳಿಸಿದರು. “112 ವರ್ಷ ಪೂರೈಸಿರುವುದು ಸಹಕಾರ ಸಂಘದ ಶಕ್ತಿ ಮತ್ತು ನಿಷ್ಠೆಯ ಪ್ರತೀಕ. ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವುದರಿಂದ ರಾಷ್ಟ್ರಕ್ಕೆ ಉತ್ತಮ ನಾಗರಿಕರನ್ನು ರೂಪಿಸಬಹುದು,” ಎಂದರು.
ಅಧ್ಯಕ್ಷ ಎ. ಅಮೃತ್ ರಾಜ್ ಅವರು, ಸಹಕಾರದ ತತ್ವದ ಮೇಲೆ ನಿಂತಿರುವ ಈ ಸಂಘವು ಅಧಿಕಾರಿ–ನೌಕರರ ಏಳಿಗೆಗಾಗಿ ಶತಮಾನಕ್ಕೂ ಹೆಚ್ಚು ಕಾಲ ಶ್ರಮಿಸುತ್ತಿದೆ ಎಂದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಪರಿಸರ ರಕ್ಷಕಿ ಸಾಲು ಮರದ ತಿಮ್ಮಕ್ಕ ಅವರ ಸ್ಮರಣಾರ್ಥ ಪ್ರಶಸ್ತಿ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಸಿ.ಎಸ್. ಶಡಕ್ಷರಿ ಅವರು, ಸಹಕಾರ ಸಂಘಗಳ ಶತಮಾನಗಳ ಪರಂಪರೆ ನೌಕರರಿಗೆ ಆರ್ಥಿಕ ಭದ್ರತೆ ನೀಡಿದೆ ಎಂದರು. 7ನೇ ವೇತನ ಆಯೋಗ ಜಾರಿಗೆ ಬಿಬಿಎಂಪಿ–ಜಿಬಿಎ ನೌಕರರ ಸಹಕಾರ ಮಹತ್ವದ್ದಾಗಿತ್ತು ಎಂದು ಸ್ಮರಿಸಿದರು.
ನಟಿ ವಿನಯಪ್ರಸಾದ್ ಅವರು, ಶಿಕ್ಷಣ–ಕಲೆ–ಸಂಸ್ಕೃತಿ ಕ್ಷೇತ್ರಗಳಲ್ಲಿ ಪ್ರೋತ್ಸಾಹ ನೀಡಿದಾಗ ಚಿಕ್ಕ ಮೊಳಕೆ ದೊಡ್ಡ ಮರವಾಗುತ್ತದೆ ಎಂದು ಹೇಳಿದರು. ಪ್ರತಿಭಾವಂತ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಬೆಂಬಲ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಆರೋಗ್ಯಾಧಿಕಾರಿ ಡಾ. ನಿರ್ಮಲ ಬುಗ್ಗಿ, ಆರೋಗ್ಯಾಧಿಕಾರಿ ಡಾ. ಎ.ಎಸ್. ಬಾಲಸುಂದರ್, ಜಂಟಿ ಆಯುಕ್ತ (ಕಂದಾಯ) ಲಕ್ಷ್ಮಿದೇವಿ ಆರ್, ಮುಖ್ಯ ಅಭಿಯಂತರ ಬಸವರಾಜ್ ಎಸ್. ಕಬಾಡೆ, ಉಪ ಕಾನೂನು ಸಲಹೆಗಾರ ಮುನಿರಾಜು ಎಂ., ಸಹಾಯಕ ಕಾರ್ಯಪಾಲಕ ಅಭಿಯಂತರ ಹೆಚ್.ಕೆ. ತಿಪ್ಪೇಶ್, ಸಹ ಕಂದಾಯ ಅಧಿಕಾರಿ ಎನ್. ಕೃಷ್ಣ, ವಿಷಯ ಪರಿವೀಕ್ಷಕ ಕುಮಾರ್, ಕಂದಾಯ ಪರಿವೀಕ್ಷಕ ಎಸ್. ಆರ್ಮುಗಂ, ಚಾಲಕ ಸಂಪತ್ ಕುಮಾರ್ ಸೇರಿದಂತೆ ಹಲವರಿಗೆ ‘ಸಾಲು ಮರದ ತಿಮ್ಮಕ್ಕ’ ಪ್ರಶಸ್ತಿ ಪ್ರದಾನಿಸಲಾಯಿತು.
