ಬೆಂಗಳೂರು, ಆಗಸ್ಟ್ 15: ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯೋತ್ಸವ ಕಾಲ್ನಡಿಗೆ ಜಾಥ ಮತ್ತು ನವೆಂಬರ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಮತ್ತು ಹುತಾತ್ಮರಿಗೆ ನುಡಿನಮನ ಕಾರ್ಯಕ್ರಮದ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭವನ್ನು ಆಯೋಜಿಸಿತು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬಿಬಿಎಂಪಿ ಆಡಳಿತಗಾರ ತುಷಾರ್ ಗಿರಿ ನಾಥ್, ಮುಖ್ಯ ಆಯುಕ್ತ ಮಹೇಶ್ವರ ರಾವ್, ವಿಶೇಷ ಆಯುಕ್ತರಾದ ಡಾ. ಹರೀಶ್, ಮುನೀಶ್ ಮೌದ್ಗೀಲ್, ಪ್ರೀತಿ ಗೆಹ್ಲೋಟ್ ಹಾಗೂ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ಅಧಿಕೃತವಾಗಿ ಜಾಥಕ್ಕೆ ಚಾಲನೆ ನೀಡಿದರು ಮತ್ತು ಕಾರ್ಯಕ್ರಮದ ಪೋಸ್ಟರ್, ಟೀಸರ್‌ಗಳನ್ನು ಅನಾವರಣಗೊಳಿಸಿದರು.
ಎ. ಅಮೃತ್ ರಾಜ್ ಮಾತನಾಡಿ, ಕನ್ನಡಕ್ಕೆ 2,500 ವರ್ಷಗಳ ಇತಿಹಾಸವಿದ್ದು, ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು. ಸಂಘವು ರಾಜ್ಯದ ಹೊರಗೆ ಹಾಗೂ ವಿದೇಶದಲ್ಲಿಯೂ ಕರ್ನಾಟಕ ರಾಜ್ಯೋತ್ಸವಗಳನ್ನು ಆಯೋಜಿಸುತ್ತಿದ್ದು, ಕನ್ನಡ ಸಾಹಿತ್ಯ, ಕಲೆ, ಸಂಗೀತ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು.
ಸಂಘವು ಹಿಂದಿನ ವರ್ಷಗಳಲ್ಲಿ ಕಾಶಿ (2022), ನೇಪಾಳ (2023) ಮತ್ತು ಹರಿದ್ವಾರ (2024)ಗಳಲ್ಲಿ ರಾಜ್ಯೋತ್ಸವಗಳನ್ನು ಆಯೋಜಿಸಿದ್ದು, ಈ ಬಾರಿ ಪಹಲ್ಗಾಮ್, ಕಾಶ್ಮೀರದಲ್ಲಿ ಹುತಾತ್ಮರಿಗೆ ನುಡಿನಮನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದೆ.
ಜಾಥವು ಬಿಬಿಎಂಪಿ ಕೇಂದ್ರ ಕಚೇರಿಯಿಂದ ಎಂ.ಜಿ. ರಸ್ತೆ ಗಾಂಧಿ ಪ್ರತಿಮೆಯವರೆಗೆ ಸಾಗಿದ್ದು, ಅಲ್ಲಿ ಮಹಾತ್ಮ ಗಾಂಧಿಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು, ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಭಾಗವಹಿಸಿದರು.