Home ಬೆಂಗಳೂರು ನಗರ ಬಿಬಿಎಂಪಿಯಲ್ಲಿ 136 ಮಂದಿ ಅನವಶ್ಯಕ ಅಧಿಕಾರಿಗಳಿಂದ ವಾರ್ಷಿಕ ಕನಿಷ್ಠ 36 ಕೋಟಿ ರೂ. ತೆರಿಗೆ ಹಣ...

ಬಿಬಿಎಂಪಿಯಲ್ಲಿ 136 ಮಂದಿ ಅನವಶ್ಯಕ ಅಧಿಕಾರಿಗಳಿಂದ ವಾರ್ಷಿಕ ಕನಿಷ್ಠ 36 ಕೋಟಿ ರೂ. ತೆರಿಗೆ ಹಣ ವ್ಯರ್ಥ !

130
0
BJP leader NR Ramesh submitting memorandum to BBMP's additional commissioner (admin) Dayanand on Tuesday.
ಬಿಬಿಎಂಪಿಯ ಹೆಚ್ಚುವರಿ ಆಯುಕ್ತ (ಅಡ್ಮಿನ್) ದಯಾನಂದ್ ಅವರಿಗೆ ಬಿಜೆಪಿ ನಾಯಕ ಎನ್ ಆರ್ ರಮೇಶ್ ಅವರು ಜ್ಞಾಪನಾ ಪತ್ರವನ್ನು ಸಲ್ಲಿಸಿದರು.

ಪ್ರಮುಖ ಆದಾಯ ಬರುವ ಇಲಾಖೆಗಳಲ್ಲಿ ಅನವಶ್ಯಕ ಅಧಿಕಾರಿಗಳ ನಿಯೋಜನೆ: ಬಿಜೆಪಿ ನಾಯಕ ಎನ್ಆರ್ ರಮೇಶ್ ದೂರು

ಬೆಂಗಳೂರು:

ಬಿಬಿಎಂಪಿಯ 17 ಇಲಾಖೆಗಳ ಪೈಕಿ, ಅತಿಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ನಡೆಯುವಂತಹ ಮತ್ತು ಅತಿಹೆಚ್ಚು ಅಕ್ರಮ ಗಳಿಕೆಗೆ ಅವಕಾಶವಿರುವಂತಹ ಪ್ರಮುಖ 04 ಇಲಾಖೆಗಳಾದ ನಗರ ಯೋಜನೆ, ರಸ್ತೆಗಳ ಮೂಲಭೂತ ಸೌಕರ್ಯ, ಬೃಹತ್ ನೀರುಗಾಲುವೆ ಮತ್ತು ಯೋಜನೆ(ಕೇಂದ್ರ) ಇಲಾಖೆಗಳಲ್ಲಿ ವಾಸ್ತವವಾಗಿ ಅವಶ್ಯಕತೆ ಇರುವ ಹುದ್ದೆಗಳಿಗಿಂತಲೂ ಸುಮಾರು 136 ಮಂದಿ ಅಧಿಕಾರಿಗಳು ಅಧಿಕವಾಗಿ ನಿಯೋಜನೆಗೊಂಡಿದ್ದಾರೆ. ಇದರಿಂದ ಅಧಿಕಾರಿಗಳ ವೇತನ ಮತ್ತು ಇತರೆ ಸವಲತ್ತುಗಳಿಗಾಗಿ ಪಾಲಿಕೆ ಪ್ರತಿ ತಿಂಗಳು ಸುಮಾರು 03 ಕೋಟಿ ರೂ.ಗಳಂತೆ ವಾರ್ಷಿಕವಾಗಿ ಕನಿಷ್ಠ 36 ಕೋಟಿ ರೂ.ಗಳಷ್ಟು ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥವಾಗಿ ವೆಚ್ಛ ಮಾಡಲಾಗುತ್ತಿದ್ದು, ಅಧಿಕವಾಗಿ ನಿಯೋಜನೆಗೊಂಡಿರುವ 136 ಮಂದಿ ಅನವಶ್ಯಕ ಅಧಿಕಾರಿಗಳನ್ನು ಕೂಡಲೇ ಹಿಂತಿರುಗಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರು ಎನ್ಆರ್ ರಮೇಶ್ ರವರು ಇಂದು ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

“ವೃಂದ ಮತ್ತು ನೇಮಕಾತಿ ನಿಯಮ” ಗಳಂತೆ ಬಿಬಿಎಂಪಿ ಗೆ ಎರವಲು ಸೇವೆ ಹೆಸರಿನಲ್ಲಿ ಕೇವಲ PWD ಇಲಾಖೆಯ ಅಧಿಕಾರಿಗಳನ್ನು ಮಾತ್ರವೇ ನಿಯೋಜನೆ ಮಾಡಬೇಕೆಂಬ ನಿಯಮಗಳಿದ್ದರೂ ಸಹ HUDCO, KPTCL, KRIDL, KSFC, DMA, ಕೃಷಿ ಮತ್ತು ನೀರಾವರಿ ಇಲಾಖೆಗಳಿಂದಲೂ ಸಹ ಅಧಿಕಾರಿಗಳನ್ನು ನಿಯಮಬಾಹಿರವಾಗಿ ನಿಯೋಜನೆ ಮಾಡಲಾಗಿದೆ.

“ಎರವಲು ಸೇವೆ ನಿಯಮ” ಗಳನ್ನು ಗಾಳಿಗೆ ತೂರಿ 23 ಮಂದಿ ಅಧಿಕಾರಿಗಳು ತಮ್ಮ ರಾಜಕೀಯ ಪ್ರಭಾವಗಳನ್ನು / ಹಣದ ಪ್ರಭಾವಗಳನ್ನು ಬಳಸಿ ಹಲವಾರು ವರ್ಷಗಳಿಂದಲೂ ಪಾಲಿಕೆಯಲ್ಲೇ ತಳವೂರಿದ್ದಾರೆ. ಉದಾಹರಣೆಗೆ 2006-07 ರಲ್ಲಿ ಕಾನೂನುಬಾಹಿರವಾಗಿ ಪಾಲಿಕೆಗೆ ನಿಯೋಜನೆಗೊಂಡಿರುವ HUDCO ಸಂಸ್ಥೆಯ ಅಧಿಕಾರಿಯೊಬ್ಬರು 15 ವರ್ಷಗಳಿಂದಲೂ ಬಿಬಿಎಂಪಿ ಯಲ್ಲೇ ಬೀಡು ಬಿಟ್ಟಿದ್ದಾರೆ.

ಈ ರೀತಿ, ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ, ನಿಯಮಬಾಹಿರವಾಗಿ ಪಾಲಿಕೆಗೆ ನಿಯೋಜನೆಗೊಂಡಿರುವ ಮತ್ತು ಪ್ರಮುಖ 04 ಇಲಾಖೆಗಳಲ್ಲಿ ಅವಶ್ಯಕತೆಗಿಂತಲೂ ಅಧಿಕವಾಗಿ ನಿಯೋಜನೆಗೊಂಡಿರುವ 136 ಮಂದಿ ಅನವಶ್ಯಕ ಅಧಿಕಾರಿಗಳನ್ನು ಕೂಡಲೇ ವಾಪಸ್ಸು ಕಳುಹಿಸುವ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳನ್ನು,‌ ಪಾಲಿಕೆಯ ಮುಖ್ಯ ಆಯುಕ್ತರನ್ನು ಮತ್ತು ಆಡಳಿತಾಧಿಕಾರಿಗಳನ್ನು ಆಗ್ರಹಿಸಿ ದೂರುಗಳನ್ನು ಸಲ್ಲಿಸಲಾಗಿದೆ.

LEAVE A REPLY

Please enter your comment!
Please enter your name here