ಬೆಂಗಳೂರು:
ಬಿಬಿಎಂಪಿ ಯಲಹಂಕ ವಲಯ ಬ್ಯಾಟರಾಯನಪುರ ವಿಧಾನಸಬಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾನ್ಯತಾ ಟೆಕ್ ಪಾರ್ಕ್, ರಾಯಲ್ ಗ್ರಾಂಡ್ ಕಲ್ಯಾಣ ಮಂಟಪ ಹಾಗೂ ರೇವಾ ವಿಶ್ವವಿದ್ಯಾಲಯವು ಪಾಲಿಕೆಗೆ ಅಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರಿಂದ, ವಲಯ ಜಂಟಿ ಆಯುಕ್ತರ ನೇತೃತ್ವದ ಕಂದಾಯ ಅಧಿಕಾರಿಗಳ ತಂಡವು ಇಂದು ಸ್ಥಳಕ್ಕೆ ಭೇಟಿ ನೀಡಿ ಜಪ್ತಿ ವಾರೆಂಟ್ ನೀಡಲಾಗಿರುತ್ತದೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸಹಾಯಕ ಕಂದಾಯ ಅಧಿಕಾರಿ, ಬ್ಯಾಟರಾಯನಪುರ ಉಪವಿಭಾಗ ವ್ಯಾಪ್ತಿಯಲ್ಲಿ ವಾರ್ಡ್ ಸಂ:05(ಜಕ್ಕೂರು) ಮತ್ತು 06(ಥಣಿಸಂದ್ರ)ವ್ಯಾಪ್ತಿಯಲ್ಲಿ ಬರುವ ಈ ಕೆಳಕಂಡ ಅಸ್ತಿಗಳ ಆಸ್ತಿ ಮಾಲೀಕರು ಪಾಲಿಕೆಗೆ ಅಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಪಾಲಿಕೆ ಅಧಿನಿಯಮ 2020 ನಿಯಮ 148(4)ರಂತೆ ದಿನಾಂಕ: 01/02/2022 ರಂದು ಈ ಕೆಳಕಂಡ ಸ್ಥಳಗಳಿಗೆ ಭೇಟಿ ನೀಡಲಾಗಿರುತ್ತದೆ.

ಮಾನ್ಯತಾ ಟೆಕ್ ಪಾರ್ಕ್:
ಥಣಿಸಂದ್ರ ವಾರ್ಡ್ ವ್ಯಾಪ್ತಿಯ ನಾಗವಾರ ರಿಂಗ್ ರಸ್ತೆಯಲ್ಲಿರುವ ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ 9 ವಿವಿಧ ಬ್ಲಾಕ್‌ಗಳ ಕಟ್ಟಡಗಳಿಗೆ 2018-19ನೇ ಸಾಲಿನಲ್ಲಿ ಟೋಟಲ್ ಸ್ಟೇಷನ್ ಸರ್ವೆ ಕೈಗೊಂಡಿದ್ದು, ಆಸ್ತಿ ತೆರಿಗೆ ಪಾವತಿಯಲ್ಲಿ ಕಟ್ಟಡದ ಅಳತೆಯನ್ನು ಕಡಿಮೆ ನಮೂದಿಸಿರುವುದು ಕಂಡು ಬಂದಿರುತ್ತದೆ. ಅದರಂತೆ ದುಪ್ಪಟು ದಂಡ ಸೇರಿದಂತೆ ಒಟ್ಟು ಮೊತ್ತ ರೂ. 1013887611/- ಗಳಿಗೆ ನೋಟಿಸ್ ನೀಡಿದ್ದು, ಆಸ್ತಿ ಮಾಲೀಕರು ಮೊತ್ತ ರೂ. 286797434/- ಗಳನ್ನು ಮಾತ್ರ ಪಾವತಿಸಿದ್ದು, ರೂ. 72,70,90,177/- ಬಾಕಿಯಿರುತ್ತದೆ. ಸದರಿ ಮೊತ್ತವನ್ನು ಪಾವತಿಸಲು ಬಾಕಿ ನೋಟಿಸ್ ಅನ್ನು ಜಾರಿ ಮಾಡಲಾಗಿದ್ದರೂ ಸಹ ಬಾಕಿ ಹಣ ಪಾವತಿಸದ ಕಾರಣ ಜಪ್ತಿ ವಾರೆಂಟ್ ನೀಡಲಾಗಿರುತ್ತದೆ.

ರಾಯಲ್ ಗ್ರಾಂಡ್ ಕಲ್ಯಾಣ ಮಂಟಪ:
ಥಣಿಸಂದ್ರ ವಾರ್ಡ್ ವ್ಯಾಪ್ತಿಯ ನಾಗವಾರ ಥಣಿಸಂದ್ರ ಮುಖ್ಯರಸ್ತೆಯ ಆಸ್ತಿ ಸಂಖ್ಯೆ: 320/72/1ರ ಸ್ವತ್ತಿನ ಮಾಲೀಕರಾದ ಶ್ರೀ ಎನ್ ಆನಂದಮೂರ್ತಿ ರವರ ಮಾಲೀಕತ್ವದ ರಾಯಲ್ ಗ್ರಾಂಡ್ ಕಲ್ಯಾಣ ಮಂಟಪಕ್ಕೆ 2012-2013 ರಿಂದ ಈ ತಹಲ್ ವರೆಗೂ ಆಸ್ತಿ ತೆರಿಗೆ ಬಾಕಿ ಮೊತ್ತ ರೂ. 70,68,930/- ಗಳು ಬಾಕಿ ಇದ್ದು, ಬಾಕಿ ವಸೂಲಾತಿ ಸಂಬಂಧ ನೀಡಲಾಗಿದ್ದ ನೋಟಿಸ್‌ಗೆ ಕಳೆದ ತಿಂಗಳು ರೂ. 9 ಲಕ್ಷಕ್ಕೆ ಚೆಕ್ ನೀಡಿರುತ್ತಾರೆ. ಸದರಿ ಚೆಕ್ ಬ್ಯಾಂಕಿನ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದ ಕಾರಣ ಅಮಾನ್ಯಗೊಂಡಿರುತ್ತದೆ. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಜಪ್ತಿ ವಾರೆಂಟ್ ನೀಡಲಾಗಿರುತ್ತದೆ.
ರೇವಾ ವಿಶ್ವವಿದ್ಯಾಲಯ:
ಜಕ್ಕೂರು ವಾರ್ಡ್ ವ್ಯಾಪ್ತಿಯ ಕಟ್ಟಿಗೇನಹಳ್ಳಿ ಗ್ರಾಮದ ಖಾತಾ ಸಂಖ್ಯೆ: 101ರ ರುಕ್ಮಿಣಿ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಮಾಲೀಕತ್ವದ ರೇವಾ ವಿಶ್ವವಿದ್ಯಾಲಯ ಕಟ್ಟಡಗಳಿಗೆ 2018-19ನೇ ಸಾಲಿನಲ್ಲಿ ಟೋಟಲ್ ಸ್ಟೇಷನ್ ಸರ್ವೆ ಕೈಗೊಂಡಿದ್ದು, ಆಸ್ತಿ ತೆರಿಗೆ ಪಾವತಿಯಲ್ಲಿ ಕಟ್ಟಡದ ಅಳತೆಯನ್ನು ಕಡಿಮೆ ನಮೂದಿಸಿರುವುದು ಕಂಡು ಬಂದಿರುತ್ತದೆ. ಅದರಂತೆ ಒಟ್ಟು ಬಾಕಿ ಮೊತ್ತ ರೂ. 16,95,64,078/- ಗಳ ಬಾಕಿ ಇದ್ದು, ಬಾಕಿ ಮೊತ್ತವನ್ನು ಪಾವತಿಸಲು ಬಾಕಿ ನೋಟಿಸ್ ಅನ್ನು ಜಾಲಿ ಮಾಡಲಾಗಿರುತ್ತದೆ. ಬಾಕಿ ಮೊತ್ತ ಪಾವತಿಸದ ಕಾರಣ ಜಪ್ತಿ ವಾರೆಂಟ್ ನೀಡಲಾಗಿರುತ್ತದೆ.
ಯಲಹಂಕ ವಲಯ ವ್ಯಾಪ್ತಿಯ ಮೂರು ಆಸ್ತಿಗಳ ಪೈಕಿ ಮಾನ್ಯತಾ ಟೆಕ್‌ಪಾರ್ಕ್ 72,70,90,177 ರೂ., ರಾಯಲ್ ಗ್ರಾಂಡ್ ಕಲ್ಯಾಣಮಂಟ 70,68,930 ರೂ., ರೇವಾ ವಿಶ್ವವಿದ್ಯಾಲಯವು 16,95,64,078 ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಆಸ್ತಿ ತೆರಿಗೆ ಪಾವತಿಸುವಂತೆ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಸಹ ಬಾಕಿ ಆಸ್ತಿ ತೆರಿಗೆ ಪಾವತಿಸದ ಕಾರಣ ಇಂದು ಮೂರೂ ಆಸ್ತಿಗಳಿಗೂ ಜಪ್ತಿ ವಾರೆಂಟ್ ನೀಡಲಾಗಿರುತ್ತದೆ ಎಂದು ಯಲಹಂಕ ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ ರವರು ತಿಳಿಸಿರುತ್ತಾರೆ.