ಬೆಂಗಳೂರು:
ದಾಸಪ್ಪ ಹೆರಿಗೆ ಆಸ್ಪತ್ರೆಯ ಪಾಲಿಕ್ಲಿನಿಕ್ ವಿಭಾಗದ ಕಟ್ಟಡದಲ್ಲಿ ಉಚಿತ ಫಿಸಿಯೋಥೆರಪಿ ಕೇಂದ್ರ ಪ್ರಾರಂಭಿಸಲು ನವೀಕರಣ ಪ್ರಕ್ರಿಯೆಯನ್ನು ನಡೆಸಲಾಗುತ್ತಿದ್ದು, ಮುಂದಿನ 15 ದಿನಗಳಲ್ಲಿ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಿ ರೋಗಿಗಳಿಗೆ ಫಿಸಿಯೋಥೆರಪಿ ಸೇವೆಯನ್ನು ಪ್ರಾರಂಭಿಸಲು ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ ರವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದಾಸಪ್ಪ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಪಾಲಿಕ್ಲಿನಿಕ್ ವಿಭಾಗದ ಕಟ್ಟಡದಲ್ಲಿ ಉಚಿತ ಫಿಸಿಯೋಥೆರಪಿ ಕೇಂದ್ರವನ್ನು ಪಾಲಿಕೆ, ಎಪಿಡಿ, ಕೆ.ಎಸ್.ಡಿ.ಸಿ.ಎಫ್ ಸೇರಿ ತ್ರಿಪಕ್ಷ ಒಪ್ಪಂದದಲ್ಲಿ ಪ್ರಾರಂಭಿಸಲಾಗುತ್ತಿದೆ. ಇದರಿಂದ ನಗರದ ಎಲ್ಲಾ ನಾಗರಿಕರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು. ಜೊತೆಗೆ ಫಿಜಿಯೋಥೆರಪಿ ಕೇಂದ್ರದ ಅವಶ್ಯಕತೆಗಳ ಬಗ್ಗೆ ಎಪಿಡಿ ಸಂಸ್ಥೆ ಯವರೊಂದಿಗೆ ಚರ್ಚಿಸಿದರು.
ದಾಸಪ್ಪ ಹೆರಿಗೆ ಆಸ್ಪತ್ರೆಗೆ ಬೇಟಿ ನೀಡಿ ಶುಚಿತ್ವ ಕಾಪಾಡಿಕೊಂಡಿರುವುದನ್ನು ವೀಕ್ಷಿಸಿದರು. ಬಳಿಕ ನವಜಾತ ಶಿಶುವಿನ ಬಾಣಂತಿ ಮಹಿಳೆ, ಸಂಬಂಧಿಗಳ ಜೊತೆ ಸಮಾಲೋಚನೆ ನಡೆಸಿ ಉಚಿತವಾಗಿ ಸಹಜ ಹೆರಿಗೆ/ಸಿಸೇರಿಯನ್ ಶಸ್ತ್ರಚಿಕಿತ್ಸೆ ಸೇವೆ ನೀಡುತ್ತಿದ್ದಾರೆಯೇ ಹಾಗೂ ಹಣ ಪಡೆಯುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಬಾಣಂತಿ ಮಹಿಳೆಯ ಸಂಬಂಧಿಕರೊಬ್ಬರು ಪ್ರತಿಕ್ರಿಯಿಸಿ, ಎಲ್ಲಾ ಸೇವೆಯೂ ಉಚಿತವಾಗಿ ಸಿಗುತ್ತಿದ್ದು, ವೈದ್ಯರು ಹಾಗೂ ಸಿಬ್ಬಂದಿ ಸೌಜನ್ಯದಿಂದ ವರ್ತಿಸುತ್ತಾರೆ ಎಂದು ತಿಳಿಸಿದರು.
ದಾಸಪ್ಪ ಹೆರಿಗೆ ಆಸ್ಪತ್ರೆಯ ಆಪರೇಷನ್ ಥಿಯೇಟರ್, ಹೆರಿಗೆ ಕೊಠಡಿ, ಔಷಧ ಉಗ್ರಾಣ ಪರಿಶೀಲಿಸಿದರು ಹಾಗೂ ಆವರಣದಲ್ಲಿರುವ ಎಲ್ಲಾ ಕಟ್ಟಡಗಳು ಹಾಗೂ ಕಛೇರಿಗಳನ್ನು ಪರಿಶೀಲಿಸಿ ಹಾಳಾಗಿರುವ ಕಡೆ ತ್ವರಿತವಾಗಿ ದುರಸ್ಥಿ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾಸಪ್ಪ ಆಸ್ಪತ್ರೆಯ ಆವರಣದಲ್ಲಿರುವ ಕಟ್ಟಡಗಳ ಗೋಡೆಗಳ ಮೇಲೆ ಬೆಳೆದಿರುವ ಗಿಡಗಳನ್ನು ತೆರವುಗೊಳಿಸಿ ಮುಂದಿನ ದಿನಗಳಲ್ಲಿ ಗಿಡಗಳು ಬೆಳೆಯದಂತೆ ನೋಡಿಕೊಳ್ಳಬೇಕು. ಆಸ್ಪತ್ರೆ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯವಾಗಿದ್ದು, ಆವರಣದಲ್ಲಿರುವ 2 ಉದ್ಯಾನಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾಸಪ್ಪ ಹೆರಿಗೆ ಆಸ್ಪತ್ರೆ ಹಾಗೂ ಜನೌಷಧಿ ಕೆಂದ್ರ ಪರಿಶೀಲಿಸಿ, ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಅತ್ಯವಶ್ಯಕ ಔಷಧಗಳ ಶೇಖರಣೆ ಮಾಡಿಟ್ಟುಕೊಂಡಿರಬೇಕು. ಆಸ್ಪತ್ರೆಯ ತಜ್ಞ ವೈದ್ಯರು, ಪ್ರಸೂತಿ ತಜ್ಞರು, ಮಕ್ಕಳ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.
ದಾಸಪ್ಪ ಹೆರಿಗೆ ಆಸ್ಪತ್ರೆಯ ಪ್ರಮುಖ ದ್ವಾರದ ಬಳಿ ಒಳ ಚರಂಡಿ ಬ್ಲಾಕ್ ಆಗಿರುವ ಕಾರಣ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಈ ಸಂಬಂಧ ದಕ್ಷಿಣ ವಲಯದ, ಮುಖ್ಯ ಅಭಿಯಂತರರು ಜಲಮಂಡಳಿ ಅಧಿಕಾರಿಗಳು ಹಾಗೂ ಕೆನೆರಾ ಬ್ಯಾಂಕ್ ನ ತಾಂತ್ರಿಕ ಸಿಬ್ಬಂದಿಗಳು ಜೊತೆ ಚರ್ಚಿಸಿ ಅದಕ್ಕೆ ಶಾಶ್ವತ ಪರಿಹಾರ ನೀಡಲು ಸೂಚನೆ ನೀಡಿದರು.
ಈ ವೇಳೆ ದಕ್ಷಿಣ ವಲಯ ಮುಖ್ಯ ಅಭಿಯಂತರರಾದ ರಾಜೇಶ್, ದಕ್ಷಿಣ ವಲಯ ಆರೋಗ್ಯಾಧಿಕಾರಿ(ಕ್ಲಿನಿಕಲ್) ಡಾ. ಸರಸ್ವತಿ, ವೈದ್ಯರು, ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.