ಬೆಂಗಳೂರು:
ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆಯ ಬಳಿ ಗಂಗಾಧರೇಶ್ವರ ದೇವಸ್ಥಾನ ಬಳಿ 1 ಆಗಸ್ಟ್ 2023 ರಂದು ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಚರಣೆಯ ವೇಳೆ ದೇವಾವಲಯದ ಮೇಲ್ಭಾಗದ ಗೋಡೆ ಕುಸಿದು ಬಿದ್ದಿದ್ದು, ಪಾಲಿಕೆ ವತಿಯಿಂದ ಸದರಿ ಗೋಡೆಯ ದುರಸ್ಥಿ ಕಾರ್ಯವನ್ನು ನಡೆಸಲಾಗುತ್ತಿದೆ.
ಗೋಡೆ ಕುಸಿದಿರುವ ಸ್ಥಳಕ್ಕೆ ದಕ್ಷಿಣ ವಲಯ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಗಂಗಾಧರೇಶ್ವರ ದೇವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರಲಿದ್ದು, ದೇವಾಲಯಕ್ಕೆ ಹೊಂದಿಕೊಂಡಂತಿರುವ ಅಂಗಡಿಯ ಮೇಲ್ಭಾಗದ ಗೋಡೆಗೆ ಅಂಗಡಿಯ ನಾಮಫಲಕ ಹಾಗೂ ಶೀಟ್ ಅನ್ನು ಅಳವಡಿಸಲಾಗಿತ್ತು. ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಜೆಸಿಬಿಯ ಮೂಲಕ ನಾಮಫಲಕ ಹಾಗೂ ಶೀಟ್ ಅನ್ನು ತೆರವುಗೊಳಿಸುವ ಸಮಯದಲ್ಲಿ ದೇವಾಲದ ಮೇಲ್ಭಾಗದ ಗೋಡೆ ತುಂಬಾ ಹಳೆಯದಾಗಿದ್ದ ಪರಿಣಾಮ ಗೋಡೆ ಕುಸಿದು ಬಿದ್ದಿದೆ. ಈ ಸಂಬಂಧ ಈಗಾಗಲೇ ಪಾಲಿಕೆ ವತಿಯಿಂದ ಗೋಡೆಯ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ದಕ್ಷಿಣ ವಲಯ ಆಯುಕ್ತರು ಪ್ರತಿಕ್ರಿಯಿಸಿ, ಪಾದಚಾರಿ ತೆರವು ಕಾರ್ಯಾಚರಣೆಯ ವೇಳೆ ಆಗಿರುವ ದುರಸ್ತಿ ಕಾರ್ಯವನ್ನು ಈ ವಾರಾಂತ್ಯದೊಳಗಾಗಿ ಪೂರ್ಣಗೊಳಿಸಬೇಕು. ಜೊತಗೆ ಪಾದಚಾರಿ ಮಾರ್ಗದ ತೆರವು ಕಾರ್ಯಾಚರಣೆ ಮಾಡುವ ವೇಳೆ ಮುಜರಾಯಿ ಇಲಾಖೆಯ ಸಹಯೋಗದೊಂದಿಗೆ ಒತ್ತುವರಿ ಮಾಡಿಕೊಂಡಿರುವುದನ್ನು ಗುರುತಿಸಿ ತೆರವುಗೊಳಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಲಯ ಮುಖ್ಯ ಅಭಿಯಂತರರಾದ ರಾಜೇಶ್, ಕಾರ್ಯಪಾಲಕ ಅಭಿಯಂತರರಾದ ಮಹಂತೇಶ್, ಯರಪ್ಪ ರೆಡ್ಡಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.