ಬೆಂಗಳೂರು:
ಬಿಬಿಎಂಪಿ ಯು ಇಂದು ಬೆಡ್ ಹಂಚಿಕೆ, ವಲಯವಾರು ರೋಗಿಗಳ ನೋಂದಣಿ, ಡಿಸ್ಚಾರ್ಜ್ ಸಂಬಂಧಿತ ರಿಯಲ್ ಟೈಮ್ ಡ್ಯಾಶ್ ಬೋರ್ಡ್ ಅನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದು, ಇದರಿಂದ ಬೆಡ್ ಹಂಚಿಕೆ ಪದ್ಧತಿಯಲ್ಲಿ ಇನ್ನಷ್ಟು ಪಾರದರ್ಶಕತೆ ಕಾಣಬಹುದು ಎಂದು ಸಂಸದ ತೇಜಸ್ವೀ ಸೂರ್ಯ ತಿಳಿಸಿದರು.
ಬಿಬಿಎಂಪಿ ಬೆಡ್ ಹಂಚಿಕೆಯಲ್ಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಸಂಸದರಾದ ಶ್ರೀ ತೇಜಸ್ವೀ ಸೂರ್ಯ ರವರು, ಬಿಬಿಎಂಪಿ ಅಧಿಕಾರಿಗಳು ಹಾಗೂ ತಾಂತ್ರಿಕ ತಂಡದ ಸಹಯೋಗದೊಂದಿಗೆ ಕೈಗೊಂಡ ಸುಧಾರಣಾ ಕ್ರಮಗಳ ಭಾಗ ಇದಾಗಿದ್ದು, ನಾಗರಿಕರು https://apps.bbmpgov.in/covid19/index.html ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಡ್ಯಾಶ್ ಬೋರ್ಡ್ ಅನ್ನು ವೀಕ್ಷಿಸಬಹುದು.
ಪ್ರಸ್ತುತ ಅಪ್ಡೇಟ್ ಆಗಿರುವ ವೆಬ್ ಸೈಟ್ ನಲ್ಲಿ ಸಾರ್ವಜನಿಕರು ವಿವಿಧ ರೀತಿಯ ಬೆಡ್ ಲಭ್ಯತೆಯ ಪ್ರಮಾಣ, ಪ್ರತೀ ಆಸ್ಪತ್ರೆಯಲ್ಲಿ ಲಭ್ಯವಿರುವ ಬೆಡ್ ಸಂಖ್ಯೆ, ಪ್ರತಿ ವಲಯದಿಂದ ಆಸ್ಪತ್ರೆಗಳಲ್ಲಿ ಪ್ರವೇಶ ಪಡೆದಿರುವ ರೋಗಿಗಳ ವಿವರಗಳನ್ನು ವೀಕ್ಷಿಸಬಹುದು. ಡ್ಯಾಶ್ ಬೋರ್ಡ್ ನಲ್ಲಿ 7 ದಿನಗಳ ಅವಧಿಗೆ ಬೆಡ್ ಹಂಚಿಕೆಯಲ್ಲಿ ಆಗುವ ಬದಲಾವಣೆಗಳ ಕುರಿತು ಸಹ ಮಾಹಿತಿ ಪಡೆಯಬಹುದಾಗಿದೆ.
The new real time public dashboard for hospital bed availability launched by @BBMPCOMM today will bring more transparency and accountability in the bed allocation process.
— Tejasvi Surya (@Tejasvi_Surya) May 20, 2021
It will help the common citizen of Bengaluru.
Here, I explain the details of the portal. pic.twitter.com/Ytmrm9omcl
ಈ ಕುರಿತು ಮಾತನಾಡಿದ ಸಂಸದ ತೇಜಸ್ವೀ ಸೂರ್ಯ, “ಬಿಬಿಎಂಪಿ ಬೆಡ್ ಹಂಚಿಕೆ ವಿಧಾನದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ, ನೂತನ ಡ್ಯಾಶ್ ಬೋರ್ಡ್ ಸೇವೆ ಆರಂಭಿಸಲಾಗಿದ್ದು, ಇದರಿಂದ ಸಾರ್ವಜನಿಕರು ವಲಯವಾರು, ಆಸ್ಪತ್ರೆವಾರು ಬೆಡ್ ಲಭ್ಯತೆಯ ರಿಯಲ್ ಟೈಮ್ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಸಾರ್ವಜನಿಕ ಡ್ಯಾಶ್ ಬೋರ್ಡ್ ಮೂಲಕ ನಾಗರಿಕರು ಯಾವ ಆಸ್ಪತ್ರೆಯಲ್ಲಿ ಯಾವ ರೀತಿಯ, ಎಷ್ಟು ಬೆಡ್ ಗಳು ಲಭ್ಯ ಇವೆ ಎನ್ನುವ ಮಾಹಿತಿಯನ್ನು ಹಾಗೂ ರೋಗಿಗಳ ನೋಂದಣಿ, ಡಿಸ್ಚಾರ್ಜ್ ಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಪಡೆಯಬಹುದಾಗಿದೆ. ಸಮರೋಪಾದಿಯಲ್ಲಿ ಈ ವೇದಿಕೆಯನ್ನು ಅಭಿವೃದ್ಧಿಗೊಳಿಸಿದ್ದಕ್ಕಾಗಿ ನಾನು ಬಿಬಿಎಂಪಿ ಕಮಿಷನರ್, ಇತರ ಅಧಿಕಾರಿಗಳು ಹಾಗೂ ತಾಂತ್ರಿಕ ತಂಡಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದು ತಿಳಿಸಿದರು.
ಈ ಕಾರ್ಯಕ್ಕೆ ಸಹಕರಿಸಿದ ಇ-ಗವರ್ನನ್ಸ್ ಫೌಂಡೇಶನ್, ಪ್ರಾಡಕ್ಟ್ ನೇಷನ್, ತಾಂತ್ರಿಕ ತಂಡದ ಶ್ರೀ ಆರ್ ಕೆ ಮಿಶ್ರಾ, ಶ್ರೀ ಶರದ್ ಶರ್ಮ (ಐ ಸ್ಪಿರ್ಟ್) ಹಾಗೂ ಇತರರಿಗೆ ನನ್ನ ಧನ್ಯವಾದಗಳು.
ಇದಕ್ಕೂ ಮುಂಚೆ ಸಂಸದ ತೇಜಸ್ವೀ ಸೂರ್ಯ ರವರು ಬಿಬಿಎಂಪಿ ಅಧಿಕಾರಿಗಳು, ತಾಂತ್ರಿಕ ತಂಡದ ಸದಸ್ಯರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿ, 4 ಬಹುಮುಖ್ಯ ಸುಧಾರಣೆಗಳನ್ನು ಈಗಾಗಲೇ ಜಾರಿಗೆ ತಂದಿದ್ದು, ಬೆಡ್ ಬುಕಿಂಗ್ ಪದ್ಧತಿಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಬೆಡ್ ಲಭ್ಯತೆ ನಂತರ ನೇರ ರೋಗಿಗಳಿಗೆ ಎಸ್ ಎಂ ಎಸ್ ರವಾನೆ ಹಾಗೂ 2 ಹಂತದ ದೃಢೀಕೃತ ಲಾಗಿನ್ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಡಿಜಿಟಲ್ ಸರದಿ ಪದ್ಧತಿಯನ್ನು ಒಂದು ವಾರದ ಅವಧಿಯಲ್ಲಿ ಜಾರಿಗೆ ತರಲು ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸದರು ಇದೇ ಸಂದರ್ಭದಲ್ಲಿ ತಿಳಿಸಿದರು.