
BCCI takes Byju's to NCLT over 160 crore dues
ಹೊಸದಿಲ್ಲಿ:
ಸಂಕಷ್ಟದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಬೈಜೂಸ್ ಗೆ ಇದೀಗ ಮತ್ತೊಂದು ಆಘಾತ ಎದುರಾಗಿದ್ದು, ಒಪ್ಪಂದ ಕೊನೆಗೊಂಡ ಬಳಿಕ ಕಂಪನಿ ಪಾವತಿಸಬೇಕಾದ 160 ಕೋಟಿ ರೂಪಾಯಿ ಬಾಕಿಯನ್ನು ವಸೂಲಿ ಮಾಡಿಕೊಡುವಂತೆ ಕೋರಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಷ್ಟ್ರೀಯ ಕಂಪನಿ ಕಾನೂನುಗಳ ನ್ಯಾಯಮಂಡಳಿ (ಎನ್ ಸಿಎಲ್ ಟಿ)ಯ ಮೊರೆ ಹೋಗಿದೆ.
ಆರು ತಿಂಗಳಿನಿಂದ ಈ ಮೊತ್ತ ಬಾಕಿ ಇದ್ದು, ಇದನ್ನು ಪಾವತಿಸುವಂತೆ ಕೋರಲಾಗಿದೆ. “ನಾವು ಬಿಸಿಸಿಐ ಜತೆ ಈ ವ್ಯಾಜ್ಯವನ್ನು ಇತ್ಯರ್ಥಪಡಿಸಲು ಮಾತುಕತೆ ನಡೆಸುತ್ತಿದ್ದೇವೆ. ಇದು ಸಧ್ಯದಲ್ಲೇ ಇತ್ಯರ್ಥವಾಗಲಿದೆ” ಎಂದು ಬೈಜೂಸ್ ಕಂಪನಿ ವಕ್ತಾರರು ಹೇಳಿದ್ದಾರೆ. 2022ರ ಮಾರ್ಚ್ ನಲ್ಲಿ ಕೊನೆಗೊಂಡ ಪ್ರಾಯೋಜಕತ್ವ ಗುತ್ತಿಗೆಗೆ ಸಂಬಂಧಿಸಿದಂತೆ ಈ ವ್ಯಾಜ್ಯ ನಡೆಯುತ್ತಿದೆ.
ಈ ಅವಧಿಯೊಳಗೆ ಬೈಜೂಸ್ ಎಲ್ಲ ಮೊತ್ತವನ್ನು ಪಾವತಿಸಿತ್ತು. ಹೊಸ ಪ್ರಯೋಕರನ್ನು ಹುಡುಕುವ ವರೆಗೆ ಈ ಒಪ್ಪಂದ ಮುಂದುವರಿಸುವಂತೆ ಅತ್ಯಂತ ಮೌಲಿಕ ಸ್ಟಾರ್ಟಪ್ ಎನಿಸಿದ್ದ ಈ ಕಂಪನಿಯನ್ನು ಬಿಸಿಸಿಐ ಕೇಳಿಕೊಂಡಿತ್ತು. ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ಬೈಜೂಸ್ ಈ ಒಪ್ಪಂದದಿಂದ ಹೊರಬರಲು ಬಯಸಿತ್ತು. ಆದರೆ ಬಿಸಿಸಿಐ, ಒಂದಷ್ಟು ಸಮಯ ಮುಂದುವರಿಸುವಂತೆ ಮನವೊಲಿಸಿತ್ತು.
ಈ ಕಾರಣದಿಂದ ಬೈಜೂಸ್ 35 ದಶಲಕ್ಷ ಡಾಲರ್ ಮೊತ್ತಕ್ಕೆ 2023ರ ನವೆಂಬರ್ವರೆಗೆ ಬಿಸಿಸಿಐ ಜತೆಗಿನ ಜೆರ್ಸಿ ಪ್ರಾಯೋಜಕತ್ವ ಒಪ್ಪಂದವನ್ನು ಮಂದುವರಿಸಿತ್ತು. ಡಿಸೆಂಬರ್ ನಿಂದ ಒಪ್ಪಂದ ಮುರಿದುಕೊಳ್ಳಲು ಬೈಜೂಸ್ ಕೇಳಿಕೊಂಡಾಗ, ಹೊಸ ಪ್ರಾಯೋಜಕರು ಹೊಸ ಹಣಕಾಸು ವರ್ಷದಿಂದ ಸಿಗುತ್ತಾರೆ. ಈ ಕಾರಣಕ್ಕೆ ಒಪ್ಪಂದವನ್ನು 2024ರ ಮಾರ್ಚ್ ವರೆಗೆ ಮುಂದುವರಿಸುವಂತೆ ಕೋರಿತ್ತು. ಈ ಅವಧಿಗೆ ಪಾವತಿಸಬೇಕಾದ 160 ಕೋಟಿ ರೂಪಾಯಿಗೆ ಸಂಬಂಧಿಸಿದಂತೆ ಈ ವ್ಯಾಜ್ಯ ನಡೆಯುತ್ತಿದೆ. ಉದ್ಯೋಗಿಗಳಿಗೆ ವೇತನ ಪಾವತಿ ಬಾಕಿ ಇರುವ ಹಿನ್ನೆಲೆಯಲ್ಲಿ ಬಿಸಿಸಿಐ ಕಾರ್ಯಾಚರಣೆ ಸಾಲದಾರರಾಗಿರುವುದರಿಂದ ಇದರ ಬಾಕಿಗಳು ಪ್ರಥಮ ಆದ್ಯತೆಗಳಲ್ಲ ಎಂದು ಸಮಾಪನಾ ತಜ್ಞರು ಅಭಿಪ್ರಾಯಪಟ್ಟಿದ್ದರು.