ಬೆಂಗಳೂರು:
ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಮಿ ನೀಡಿರುವ ರೈತ ಸಮುದಾಯದೊಂದಿಗೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರು ಮಂಗಳವಾರ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ಕಡತಗಳ ವಿಲೇವಾರಿಯಲ್ಲಿ ವಿಳಂಬ ಮಾಡುತ್ತಿರುವುದು, ಅನಗತ್ಯವಾಗಿ ದಾಖಲೆಗಳನ್ನು ನೀಡುವಂತೆ ಅಲೆದಾಡಿಸುತ್ತಿರುವುದು, ಸಣ್ಣ ಪುಟ್ಟ ಕೆಲಸಗಳಿಗೂ ಹತ್ತಾರು ದಿನಗಳವರೆಗೆ ಕಾಯಿಸುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಪರಿಹರಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ರೈತ ಮುಖಂಡ ಚನ್ನಪ್ಪ ಅವರು ರೈತರ ಪರವಾಗಿ ಅಧ್ಯಕ್ಷರು ಮತ್ತು ಆಯುಕ್ತರಲ್ಲಿ ಮನವಿ ಮಾಡಿದರು.
ಸುಮಾರು 2 ಗಂಟೆಗಳ ಕಾಲ ನಡೆದ ಸಭೆಯಲ್ಲಿ ರೈತರು ಮತ್ತು ರೈತ ಮುಖಂಡರಿಂದ ಅಹವಾಲುಗಳನ್ನು ಆಲಿಸಿ ಮಾತನಾಡಿದ ಎಸ್.ಆರ್.ವಿಶ್ವನಾಥ್ ಅವರು, ರೆವೆನ್ಯೂ ನಿವೇಶನದಲ್ಲಿ 2012 ಕ್ಕೆ ಮುನ್ನ ನಿರ್ಮಾಣವಾಗಿರುವ ಎಲ್ಲಾ ಮನೆಗಳನ್ನು 38 ಡಿ ಅಡಿಯಲ್ಲಿ ಸಕ್ರಮ ಮಾಡಲಾಗುತ್ತದೆ. ಇದಕ್ಕೆ ಈ ಹಿಂದೆ ನಿಗದಿಪಡಿಸಲಾಗಿದ್ದ ಶುಲ್ಕದಲ್ಲಿ ಕಡಿತಗೊಳಿಸಲು ಚಿಂತನೆ ನಡೆಸಿದ್ದು, ಈ ಸಂಬಂಧ ಮುಂದಿನ ಪ್ರಾಧಿಕಾರದ ಸಭೆಯಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಆದರೆ, ರೆವೆನ್ಯೂ ನಿವೇಶನಗಳನ್ನು ಸಕ್ರಮ ಮಾಡುವ ಅಧಿಕಾರ ಬಿಡಿಎಗೆ ಇಲ್ಲದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕೆ ತೊಂದರೆ ಇರುವ ಕಡೆ ಸರ್ವೆ ಮಾಡಿಸಿ ಮನೆಗಳಿಗೆ ಮತ್ತು ಖಾಲಿ ಜಾಗಕ್ಕೆ ಪರಿಹಾರ ನೀಡಿ ರಸ್ತೆ ನಿರ್ಮಾಣ ಮಾಡುವ ಕುರಿತು ಮುಂದಿನ ಪ್ರಾಧಿಕಾರದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಬೆಂಗಳೂರಿನ ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ಜಮೀನುಗಳನ್ನು ನೀಡಿದ್ದ ರೈತರ ಜೊತೆ ಇಂದು ಬಿಡಿಎ ಕಚೇರಿಯಲ್ಲಿ ಸಭೆ ನಡೆಸಲಾಯಿತು ಮತ್ತು ಅವರ ಅಹವಾಲುಗಳನ್ನು ಸ್ವೀಕರಿಸಿ ಕೂಡಲೇ ಕ್ರಮ ಕೈಗೊಳ್ಳಲು ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಲಾಯಿತು…@BSBommai @BJP4Karnataka pic.twitter.com/16oS0d6hEF
— S R Vishwanath (@SRVishwanathBJP) August 3, 2021
ಪಿಆರ್ ಆರ್ ರಸ್ತೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರ್ಯಾಯವಾಗಿ ಬದಲಿ ನಿವೇಶನವನ್ನು ನೀಡುವ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ ಎಂದು ತಿಳಿಸಿದ ಅವರು, ಓಎಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇನ್ನು ಪರಿಹಾರ ಮತ್ತು ಪ್ರೋತ್ಸಾಹ ಯೋಜನೆಯಡಿ ನಿವೇಶನ ಪಡೆದುಕೊಳ್ಳಲು ಕಳೆದ ಹಲವು ವರ್ಷಗಳಿಂದ ಸಾಧ್ಯವಾಗುತ್ತಿಲ್ಲ ಎಂಬ ದೂರಿಗೆ ಸ್ಪಂದಿಸಿದ ಅಧ್ಯಕ್ಷರು, ಕಾಲಮಿತಿಯೊಳಗೆ ರೈತರ ಕಡತಗಳನ್ನು ಒಂದು ತಿಂಗಳೊಳಗಾಗಿ ವಿಲೇವಾರಿ ಮಾಡಬೇಕೆಂದು ಆಯುಕ್ತರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಮಾತನಾಡಿದ ಆಯುಕ್ತ ರಾಜೇಶ್ ಗೌಡ ಅವರು, ಯಾವುದೇ ವಿಳಂಬವಾಗದೇ ರೈತರ ಕಡತಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ರೈತ ಮುಖಂಡರಾದ ಕೃಷ್ಣಪ್ಪ, ಮೋಹನ್ ಸೇರಿದಂತೆ 50 ಕ್ಕೂ ಹೆಚ್ಚು ರೈತ ಮುಖಂಡರು ಮತ್ತು ಬಿಡಿಎ ಅಧಿಕಾರಿಗಳಾದ ಡಾ.ಸೌಜನ್ಯ, ಬಾಳೀಕಾಯಿ, ಶಾಂತರಾಜಣ್ಣ, ಡಾ.ಬಸಂತಿ, ಮಧು, ರಾಮಪ್ರಸಾದ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಮತ್ತು ರೈತರು ಇದ್ದರು.