ಬೆಂಗಳೂರು:
ಮುಂದಿನ ಒಂದು ವರ್ಷದಲ್ಲಿ ಬಿಡಿಎಗೆ ಈ ಹಿಂದಿನ ಖ್ಯಾತಿಯನ್ನು ತಂದುಕೊಡಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ಗುರುವಾರ ನಿವೃತ್ತಿ ಹೊಂದಿದ ಪ್ರಾಧಿಕಾರದ ಆರು ಮಂದಿ ಸಿಬ್ಬಂದಿಗೆ ನೌಕರರ ಸಂಘ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಡಿಎ ಆರಂಭದ ದಿನದಿಂದ ಇಲ್ಲಿವರೆಗೆ ಸಾವಿರಾರು ನಾಗರಿಕರಿಗೆ ನಿವೇಶನವನ್ನು ವಿತರಿಸುವ ಮೂಲಕ ಮನೆ ಕಟ್ಟಿಕೊಳ್ಳುವ ಅವರ ಕನಸನ್ನು ನನಸಾಗಿಸಿದೆ. ಈ ಮೂಲಕ ಸಂಸ್ಥೆಗೆ ತನ್ನದೇ ಆದ ಖ್ಯಾತಿ ಇತ್ತು. ಆದರೆ, ಕಳೆದ ಕೆಲವು ವರ್ಷಗಳಿಂದೀಚೆಗೆ ಸಂಸ್ಥೆಗೆ ಸೇರಿದ ಕೆಲವು ಭ್ರಷ್ಟರಿಂದಾಗಿ ಕೆಟ್ಟ ಹೆಸರು ಬರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕಳಂಕವನ್ನು ಹೋಗಲಾಡಿಸಿ ಬಿಡಿಎಗೆ ಒಂದು ಕಾಯಕಲ್ಪವನ್ನು ತಂದುಕೊಡಲು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಸಂಕಲ್ಪ ಮಾಡಿದ್ದಾರೆ. ಅವರ ಈ ಮಹತ್ವಾಕಾಂಕ್ಷೆಯನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನನ್ನ ಮೇಲಿದೆ. ಈ ಜವಾಬ್ದಾರಿಯನ್ನು ಅರಿತು ಬಿಡಿಎಯನ್ನು ಮುನ್ನಡೆಸಲಿದ್ದು, ಇದಕ್ಕೆ ನೌಕರ ವರ್ಗದ ಸಹಕಾರ ಬೇಕೆಂದು ಕೋರಿದರು.
ಯಾವುದೇ ಕಾರಣಕ್ಕೂ ಸಿಬ್ಬಂದಿ ಸಾರ್ವಜನಿಕರಿಗೆ ಕೆಲಸ ಮಾಡಿಕೊಡುವ ಸಂದರ್ಭದಲ್ಲಿ ಲಂಚಕ್ಕೆ ಕೈಚಾಚಬಾರದು ಮತ್ತು ಅವರನ್ನು ಸತಾಯಿಸಬಾರದು. ಎಲ್ಲರೂ ಕೈಜೋಡಿಸಿ ಜನಸ್ನೇಹಿಯಾದ ಸಂಸ್ಥೆ ಎಂಬ ಈ ಹಿಂದಿನ ಖ್ಯಾತಿಯನ್ನು ಮತ್ತೆ ತರಲು ಶ್ರಮಿಸಬೇಕೆಂದು ಅವರು ಕರೆ ನೀಡಿದರು.
ಆರು ತಿಂಗಳಲ್ಲಿ ಶಿವರಾಂ ಕಾರಂತ ಬಡಾವಣೆಗೆ ರೂಪ ಕೆಲವು ತಕರಾರುಗಳ ಹಿನ್ನೆಲೆಯಲ್ಲಿ ಉದ್ದೇಶಿತ ಡಾ.ಶಿವರಾಂ ಕಾರಂತ ಬಡಾವಣೆ ನಿರ್ಮಾಣ ಕಾರ್ಯಕ್ಕೆ ಹಿನ್ನಡೆ ಉಂಟಾಗಿತ್ತು. ಆದರೆ, ಇದೀಗ ಸುಪ್ರೀಂಕ ಆ ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡಿ ಬಡಾವಣೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದೆ. ಈ ಹಿನ್ನೆಲೆಯಲ್ಲಿ ಮೂವರು ತಜ್ಞರ ಉನ್ನತ ಮಟ್ಟದ ಸಮಿತಿಯೊಂದನ್ನು ರಚನೆ ಮಾಡಿದ್ದು, ಬಡಾವಣೆಯ ಸಾಧಕ ಭಾದಕಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ ಎಂದರು.
ಆದರೆ, ಯಾವುದೇ ತಕರಾರಿಲ್ಲದ ಭೂಮಿಯಲ್ಲಿ ಬಡಾವಣೆ ನಿರ್ಮಾಣಕ್ಕೆ ಬಿಡಿಎ ಸಿದ್ಧತೆ ನಡೆಸಿದೆ. ಬಡಾವಣೆಯ ನೀಲನಕ್ಷೆಯನ್ನು ರೂಪಿಸಲಾಗುತ್ತಿದ್ದು, ಮುಂದಿನ ಆರು ತಿಂಗಳಲ್ಲಿ ಈ ಭೂಮಿಯಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ, ವಿತರಣೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಅರ್ಕಾವತಿ ಬಡಾವಣೆ ರೀತಿಯಲ್ಲಿ ಯಾವುದೇ ಲೋಪವಾಗದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಶಿವರಾಂ ಕಾರಂತ ಬಡಾವಣೆಯನ್ನು ಒಂದು ಮಾದರಿ ಬಡಾವಣೆಯನ್ನಾಗಿ ರೂಪಿಸಲಾಗುವುದು ಎಂದರು.
ವಾರದಲ್ಲಿ ಎಸ್ಐಟಿಗೆ ಸ್ಪಷ್ಟ ಚಿತ್ರಣ
ಇತ್ತೀಚಿನ ವರ್ಷಗಳಲ್ಲಿ ಬಿಡಿಎಯಲ್ಲಿ ನಡೆದಿರುವ ಹಗರಣಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲು ಈಗಾಗಲೇ ನಿರ್ಧರಿಸಲಾಗಿದೆ. ಪ್ರಮುಖವಾಗಿ ಯಾವ್ಯಾವ ಹಗರಣಗಳನ್ನು ಈ ತಂಡಕ್ಕೆ ಒಪ್ಪಿಸಬೇಕೆಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಒಂದು ವಾರದೊಳಗೆ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲಾಗುತ್ತದೆ. ನಂತರ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿ ತನಿಖಾ ತಂಡವನ್ನು ರಚಿಸಲಾಗುತ್ತದೆ ಮತ್ತು ತನಿಖೆ ಪ್ರಕ್ರಿಯೆಗೆ ಕಾಲಮಿತಿಯನ್ನು ಹಾಕಲಾಗುತ್ತದೆ ಎಂದು ಅವರು ತಿಳಿಸಿದರು.