
ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರು ತಮ್ಮ ಜೀವನದ ಮಹತ್ವದ ಘಟನೆ ಒಂದನ್ನು ಬಹಿರಂಗಪಡಿಸಿದ್ದಾರೆ. 2019ರ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರದ ರಾಜಕೀಯ ಸಂಕಷ್ಟದ ಸಮಯದಲ್ಲಿ, ಬಿಜೆಪಿಯಿಂದ ಅವರಿಗೆ “ಡೆಪ್ಯೂಟಿ ಸಿಎಂ ಆಗಿ ಪಕ್ಷ ಸೇರು ಅಥವಾ ಜೈಲಿಗೆ ಹೋಗು” ಎಂಬ ಪ್ರಸ್ತಾಪ ಬಂದಿತ್ತು ಎಂದು ಅವರು ಹೇಳಿದರು. ಆದರೆ ಪಕ್ಷನಿಷ್ಠೆಗಾಗಿ ಅವರು ಜೈಲಿನನ್ನೇ ಆಯ್ಕೆ ಮಾಡಿಕೊಂಡರು.
ಬೆಂಗಳೂರು ಎಫ್ಕೆಸಿಸಿಐ ಸಭಾಂಗಣದಲ್ಲಿ ನಿರ್ದೇಶಕ ಕೆ.ಎಂ. ರಘು ಬರೆದಿರುವ ಅವರ ಜೀವನಚರಿತ್ರೆ ‘A Symbol of Loyalty’ (ಪಕ್ಷನಿಷ್ಠೆಯ ಪ್ರತೀಕ) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಈ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದರು.
“ದೆಹಲಿಯಿಂದ ನನ್ನಿಗೆ ಫೋನ್ ಬಂತು – ‘ನೀವು ಡೆಪ್ಯೂಟಿ ಸಿಎಂ ಆಗ್ತೀರಾ ಅಥವಾ ಜೈಲಿಗೆ ಹೋಗ್ತೀರಾ, ಒಂದನ್ನ ಆಯ್ಕೆಮಾಡಿ’ ಅಂತ ಕೇಳಿದರು. ನಾನು ಪಕ್ಷದ ನಿಷ್ಠೆಗೆ ಬದ್ಧನಾಗಿ, ಜೈಲು ಆಯ್ಕೆ ಮಾಡಿಕೊಂಡೆ, ಅಧಿಕಾರವಲ್ಲ,” ಎಂದು ಡಿಕೆಶಿ ಹೇಳಿದರು.
ಅವರು 2019ರಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಿದ್ದ ಸಂದರ್ಭದಲ್ಲಿ ಕನಕಪುರದಿಂದ ಓಡಿಕೊಂಡು ಬಂದು ಐದು ಶಾಸಕರನ್ನು ವಾಪಸ್ ಕರೆದುಕೊಂಡು ಬಂದ ಘಟನೆ ನೆನಪಿಸಿಕೊಂಡರು. ಆ ವೇಳೆಯಲ್ಲಿ ದೆಹಲಿಯಿಂದ ಕೆಲವು ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳ ಮೂಲಕ ಹಾಗೂ ಡಿಜಿ ಮಟ್ಟದ ಅಧಿಕಾರಿಗಳಿಂದ ಆಫರ್ ಬಂದಿತ್ತು ಎಂದು ಹೇಳಿದರು.
“ನನಗೆ ರಾಜೀವ್ ಗಾಂಧಿ ಅಸೆಂಬ್ಲಿ ಟಿಕೆಟ್ ಕೊಟ್ಟಿದ್ದರು, ಅನೇಕ ನಾಯಕರು ನನ್ನ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅಧಿಕಾರಕ್ಕಾಗಿ ಪಕ್ಷ ಬಿಟ್ಟು ಹೋಗೋದು ನನ್ನ ಧರ್ಮವಲ್ಲ,” ಎಂದು ಡಿಕೆಶಿ ಹೇಳಿದರು.
ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ ಅವರು, “ನಾನು ಈಗ 63 ವರ್ಷ. ಇನ್ನೂ ಎಂಟು ವರ್ಷ ರಾಜಕಾರಣ ಮಾಡಬಹುದು. ಬಳಿಕ ಹೊಸ ಮುಖಗಳು, ಸುಮಾರು 500 ಹೊಸ ನಾಯಕರು ಬೆಂಗಳೂರಿನಲ್ಲಿ ಮುಂದಕ್ಕೆ ಬರಬೇಕು,” ಎಂದರು.
ಅವರ ವಿರೋಧಿ ರಾಜಕೀಯ ಹಾದಿಯ ಬಗ್ಗೆ ಮಾತನಾಡಿದ ಡಿಕೆಶಿ, ದೇವೇಗೌಡರ ಕುಟುಂಬದ ವಿರುದ್ಧ ಹೋರಾಟ ಮಾಡಿದ್ದರೂ, ಪಕ್ಷದ ನಿಷ್ಠೆಗಾಗಿ ಕುಮಾರಸ್ವಾಮಿ ಜೊತೆಗೆ ಸಹಕಾರ ನೀಡಬೇಕಾದ ಸಂದರ್ಭ ಬಂದಿತ್ತು ಎಂದು ಹೇಳಿದರು.
ಆರ್ಎಸ್ಎಸ್ ಕುರಿತು ಅವರು ಮಾಡಿದ ಹಿಂದಿನ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, “ನಾನು ಯಾರಿಗೂ ಕ್ಷಮೆ ಕೇಳಿಲ್ಲ, ಆದರೆ ನನ್ನ ಕಾರ್ಯಕರ್ತರಿಗೆ ನೋವಾದರೆ ಕ್ಷಮೆ ಕೇಳಿದೆ,” ಎಂದರು.
ಕಾರ್ಯಕ್ರಮದ ವೇಳೆ ಅವರು ಸಂಸ್ಕೃತ ಶ್ಲೋಕ ಪಠಿಸಿದರು ಮತ್ತು ತಮ್ಮ ಮುಂದಿನ ಪುಸ್ತಕ ‘ನೀರಿನ ಮೇಲೆ ಹೆಜ್ಜೆ’ ನವೆಂಬರ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಿಡುಗಡೆಗೊಳ್ಳಲಿದೆ ಎಂದು ಘೋಷಿಸಿದರು.