ಬೆಳಗಾವಿ:
ಆಘಾತಕಾರಿ ಘಟನೆಯೊಂದರಲ್ಲಿ ನಗರದ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಆವರಣದಲ್ಲಿರುವ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಅನಧಿಕೃತವಾಗಿ ಪಾರ್ಟಿ ಆಯೋಜಿಸಿದ್ದ ಏಳು ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ನೌಕರರಲ್ಲಿ ಡಿಎಚ್‌ಒ ಅವರ ಕಾರು ಚಾಲಕ ಮಂಜುನಾಥ ಪಾಟೀಲ, ಮಹೇಶ ಹಿರೇಮಠ, ರಮೇಶ ನಾಯ್ಕ, ಸತ್ಯಪ್ಪ ತಮ್ಮಣ್ಣನವರ, ಅನಿಲ ತಿಪ್ಪಣ್ಣವರ, ದೀಪಕ ಗಾವಡೆ, ಯಲ್ಲಪ್ಪ ಮುನ್ನವಳ್ಳಿ ಸೇರಿದ್ದಾರೆ. ಇವರ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ ಅಮಾನತುಗೊಳಿಸಿ ಆದೇಶ ಹೊರಡಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ.
ಪಾರ್ಟಿಯಲ್ಲಿ ಭಾಗವಹಿಸಿದವರೊಬ್ಬರು ರೆಕಾರ್ಡ್ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ.
ಗಾಂಧಿ ಜಯಂತಿಯಂದು ಮಹಾತ್ಮ ಗಾಂಧಿಯವರ ಭಾವಚಿತ್ರದ ಮುಂದೆ ಉದ್ಯೋಗಿಗಳು ಮದ್ಯಪಾನ ಮಾಡುವುದು, ಹಾಡುವುದು, ನೃತ್ಯ ಮಾಡುವುದು ಮತ್ತು ಹರಟೆ ಹೊಡೆಯುವುದನ್ನು ವೀಡಿಯೊ ಪ್ರದರ್ಶಿಸಿತು. ಈ ಕೃತ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಗಾಂಧಿ ಜಯಂತಿಯಂದು ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಹಾಗಾಗಿ, ಈ ನಿಯಮಾವಳಿಗಳನ್ನು ಉಲ್ಲಂಘಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ಪಾರ್ಟಿ ಆಯೋಜಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.