ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ 22 ನೇ ಅವಧಿಯ ಮೇಯರ್ ಆಗಿ ಸವಿತಾ ಕಾಂಬಳೆ, ಉಪ ಮೇಯರ್ ಆಗಿ ಆನಂದ ಚೌವಾಣ ಆಯ್ಕೆ ಆಗಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಮೇಯರ್ ಚುನಾವಣೆ ಕೊನೆ ಕ್ಷಣದ ವರೆಗೂ ರಾಜಕೀಯ ಹೈಡ್ರಾಮಾಗೆ ಸಾಕ್ಷಿಯಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆಗೆ ಐದು ವರ್ಷದ ಬಳಿಕ ಕನ್ನಡಿಗರು ಮೇಯರ್ ಆಗಿದ್ದಾರೆ. ಕನ್ನಡತಿ ಕಾರ್ಮಿಕ ಮಹಿಳೆ ಸವಿತಾ ಕಾಂಬಳೆ ಮೇಯರ್ ಆಗಿ ಅವಿರೋಧ ಆಯ್ಕೆಯಾದ್ರೆ. ಅದೇ 39 ಮತ ಪಡೆದ ಆನಂದ ಚೌವಾಣ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಲಂಬಾಣಿ ಸಮುದಾಯಕ್ಕೆ ಮೇಯರ್ ಪಟ್ಟ ಕೊಡಲಿಸಲು ಪಿ.ರಾಜೀವ್ ನಡೆಸಿದ ಲಾಭಿ ಫಲಕೊಡಲಿಲ್ಲ. ಅಭಯ, ಅನಿಲ್ ಯಾವ ಲಾಭಿಗೂ ಬಗ್ಗದೇ ಅಂದುಕೊಂಡಿದ್ದನ್ನೇ ಸಾಧಿಸಿದ್ದಾರೆ.
ಬಿಜೆಪಿ ನಾಯಕರು ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡೇ ಕನ್ನಡಿತಿಗೆ ಮೇಯರ್, ಮರಾಠಿಗರಿಗೆ ಉಪ ಮೇಯರ್ ಸ್ಥಾನ ಕೊಟ್ಟಿದ್ದಾರೆ.
ಇಂದು ಬೆಳಗಾವಿ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ನೇತೃತ್ವದಲ್ಲಿ ಚುನಾವಣೆ ನಡೆಯಿತು. ಎಸ್.ಸಿ ವರ್ಗಕ್ಕೆ ಮೀಸಲಿರೋ ಮೇಯರ್ ಸ್ಥಾನಕ್ಕೆ ಬಿಜೆಪಿ ಸದಸ್ಯರಾದ ಸವಿತಾ ಕಾಂಬಳೆ, ಲಕ್ಷ್ಮಿ ರಾಠೋಡ ತಮ್ಮ ಉಮೇದುವಾರಿಕೆ ಸಲ್ಲಿಸಿದ್ರು. ಅತ್ತ ಉಪ ಮೇಯರ್ ಸ್ಥಾನಕ್ಕೆ ಬಿಜೆಪಿ ಸದಸ್ಯರಾದ ಆನಂದ ಚೌವಾಣ ಮತ್ತು ಮಾಧುರಿ ರಾಗೋಚೆ ನಾಮಪತ್ರ ಸಲ್ಲಿಸಿದ್ರೆ.
ಅದೇ ಕಾಂಗ್ರೆಸ್ ಬೆಂಬಲ ಪಕ್ಷೇತರ ಅಭ್ಯರ್ಥಿ ಜ್ಯೋತಿ ಕಡೋಲಕರ ನಾಮಪತ್ರ ಸಲ್ಲಿಸಿದ್ರು. ಆದ್ರೆ ಪಕ್ಷದ ಸೂಚನೆಯಂತೆ ಕೊನೆ ಕ್ಷಣದಲ್ಲಿ ಲಕ್ಷ್ಮಿ ರಾಠೋಡ ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡ್ರು. ಹೀಗಾಗಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಐದು ವರ್ಷದ ಬಳಿಕ ಕನ್ನಡ ಭಾಷಿಕ ಸವಿತಾ ಕಾಂಬಳೆ ಮೇಯರ್ ಆಗಿ ಅವಿರೋಧ ಆಯ್ಕೆ ಆದ್ರು. ಅತ್ತ ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ ಚೌವಾಣ ಪರ 39 ಮತಗಳನ್ನ ಪಡೆದು ಉಪ ಮೇಯರ್ ಆಗಿ ಆಯ್ಕೆಯಾದರು.
ಅದೇ ಕಾಂಗ್ರೆಸ್ ಬೆಂಬಲಿತ ಜ್ಯೋತಿ ಕಡೋಲಕರ ಬರೀ 20 ಮತಗಳನ್ನ ಪಡೆದುಕೊಂಡ್ರು. ಕೇಸರಿ ಪೇಟ ಹಾಕಿಕೊಂಡು ಬಂದಿದ್ದ ಬಿಜೆಪಿ ಸದಸ್ಯರು ಪಾಲಿಕೆ ಸದನದಲ್ಲಿ ಜೈಶ್ರೀರಾಮ ಘೋಷಣೆ ಹಾಕಿದ್ರು. ಮೇಯರ್, ಉಪ ಮೇಯರ್ ಆಯ್ಕೆ ಆಗುತ್ತಿದ್ದಂತೆ ಜೈ ಶ್ರೀರಾಮ ಘೋಷಣೆ ಮೊಳಗಿದವು. ನೂತನ ಮೇಯರ್, ಉಪ ಮೇಯರ್ ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮುರಗೇಶ ನಿರಾಣಿ ಮತ್ತು ಅನಿಲ್ ಬೆನಕೆ ಹಾಗೂ ಬಿಜೆಪಿ ಶಾಸಕ ಅಭಯ ಪಾಟೀಲ್ ಅಭಿನಂದಿಸಿದ್ರು.
ಬೆಳಗಾವಿ ಪಾಲಿಕೆ ಮೇಯರ್ ಸ್ಥಾನಕ್ಕೆ ಬಿಜೆಪಿ ಇಬ್ಬರು ನಾಯಕರ ಮಧ್ಯೆ ಕುಸ್ತಿಯೇ ನಡೆಯಿತು. ಮೇಯರ್ ಚುನಾವಣೆಗೆ ಸ್ವಯಂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಎಂಟ್ರಿಕೊಟ್ಟಿದ್ದರು. ಯಾಕೆಂದರೆ 58 ಸದಸ್ಯ ಬಲ ಹೊಂದಿರೋ ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿಯ 35 ಜನ ಸದಸ್ಯರು ಇದ್ದಾರೆ. ಸ್ಪಷ್ಟ ಬಹುಮತ ವಿದ್ದರೂ ಮೇಯರ್ ಸ್ಥಾನಕ್ಕಾಗಿ ಸವಿತಾ ಕಾಂಬಳೆ ಮತ್ತು ಲಕ್ಷ್ಮಿ ರಾಠೋಡ ಮಧ್ಯೆ ತೀವ್ರ ಪೈಪೋಟಿ ನಡೆಯಿತು. ಕಾರ್ಮಿಕ ಮಹಿಳೆ ಆಗಿರೋ ಸವಿತಾ ಕಾಂಬಳೆ ಪರವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ಬ್ಯಾಟಿಂಗ್ ಮಾಡಿದ್ರೆ. ಅದೇ ಲಂಬಾಣಿ ಸಮುದಾಯದ ಲಕ್ಷ್ಮಿ ರಾಠೋಡಗೆ ಮೇಯರ್ ಸ್ಥಾನ ಕೊಡಲಿಸಲು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಪಟ್ಟು ಹಿಡದಿದ್ದರು.
ಇದೇ ಕಾರಣಕ್ಕೆ ನಿನ್ನೆಯಷ್ಟೇ ಸಂಜೆ ವರೆಗೂ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಇಬ್ಬರನ್ನೇ ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ರು. ಆದ್ರೆ ಪಿ.ರಾಜೀವ್ ಪಟ್ಟು ಹಿಡದಿದ್ದರಿಂದ ರಾತ್ರೋರಾತ್ರಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರಗೇಶ ನಿರಾಣಿ ಚುನಾವಣಾ ವೀಕ್ಷರಾಗಿ ಬೆಳಗಾವಿ ಬಂದ್ರು. ಇಂದು ನಾಮಪತ್ರ ಸಲ್ಲಿಕೆಗೂ ಮುನ್ನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಆ ಬಳಿಕ ಬಿಜೆಪಿ ಸದಸ್ಯರ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಲಾಯಿತು. ಕೊನೆಗೆ ಅನಿಲ್ ಬೆನಕೆ, ಅಭಯ ಪಾಟೀಲ್ ಬಯಕೆಯಂತೆ ಸವಿತಾ ಪಾಟೀಲ್ ಗೆ ಮೇಯರ್ ಹುದ್ದೆ ಒಲಿದೆ.
ನೂತನ ಮೇಯರ್ ಬೆಳಗಾವಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿ ಪಕ್ಷದ ವರಿಷ್ಠರಿಗೆ ಅಭಿನಂದನೆ ತಿಳಿಸಿದ್ದಾರೆ.
