ಬೆಂಗಳೂರು:
ಬೆಳಗಾವಿಯ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯೊಬ್ಬರ ವಿವಸ್ತ್ರ ಪ್ರಕರಣದ ಸಂದರ್ಭದಲ್ಲಿ ಅದನ್ನು ತಡೆಯದೆ ಮೌನವಾಗಿದ್ದ ಇಡೀ ಗ್ರಾಮಸ್ಥರಿಗೆ ದಂಡ ವಿಧಿಸಬಹುದಾದ ಸಾಮೂಹಿಕ ಜವಾಬ್ದಾರಿ ನಿಗದಿಪಡಿಸುವ ಮಾದರಿಯಲ್ಲಿ ಯೋಜನೆ ಅಥವಾ ಕಾನೂನು ರೂಪಿಸಲು ರಾಜ್ಯ ಹೈಕೋರ್ಟ್ ಸರಕಾರಕ್ಕೆ ಮೌಖಿಕ ಸಲಹೆ ನೀಡಿದೆ.
ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಮಹಿಳೆಯ ವಿವಸ್ತ್ರಗೊಳಿಸಿದ ಘಟನೆಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ವಿಚಾರಣೆ ವೇಳೆ ನ್ಯಾಯಪೀಠ, ಬ್ರಿಟಿಷ್ ಆಡಳಿತದಲ್ಲಿ ವಿಲಿಯಂ ಬೆಂಟಿಂಗ್ ಎಂಬುವರು ಕಳ್ಳತನ ಮಾಡುವವರಿದ್ದ ಗ್ರಾಮಕ್ಕೆ ಪುಂಡದಂಡ ಎಂಬ ತೆರಿಗೆ ವಿಧಿಸುತ್ತಿದ್ದರು. ತಪ್ಪು ನಡೆಯುತ್ತಿದ್ದರೂ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದ ಸಾರ್ವಜನಿಕರಿಗೂ ಅದೇ ರೀತಿಯಲ್ಲಿ ತೆರಿಗೆ ವಿಧಿಸಲು ಮುಂದಾದಲ್ಲಿ ಗ್ರಾಮಗಳಲ್ಲಿ ಜನರಿಗೆ ಸ್ವಲ್ಪ ಜವಾಬ್ದಾರಿ ಹೆಚ್ಚಾಗಲಿದೆ. ಇಂತಹ ಘಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮೌನವಾಗಿರದೆ ಕನಿಷ್ಠ ರಕ್ಷಣಾ ಕ್ರಮಕ್ಕೆ ಮುಂದಾಗಲಿದ್ದಾರೆ ಎಂದು ಪೀಠ ತಿಳಿಸಿತು. ಅಲ್ಲದೆ, ಈ ರೀತಿಯ ಸಂದೇಶ ರವಾನೆಯಾಗಲೇಬೇಕು. ಗ್ರಾಮದ ಎಲ್ಲರಿಗೂ, ನಿರ್ದಿಷ್ಟವಾಗಿ ತಪ್ಪು ಮಾಡಿದವರು ಹಣ ಪಾವತಿಸುವಂತೆ ಮಾಡಬೇಕು ಎಂದು ಪೀಠ ತಿಳಿಸಿತು.
ಇಂತಹ ಘಟನೆ ನಡೆಯುತ್ತಿರುವ ಸಂದರ್ಭದಲ್ಲಿ ಕೃತ್ಯದಲ್ಲಿ ಭಾಗಿಯಾಗಿರುವವರಿಗಿಂತಲೂ ಅದನ್ನು ನೋಡುತ್ತ ಮೂಕ ಪ್ರೇಕ್ಷಕರಂತೆ ನಿಂತಿದ್ದವರು ಅತ್ಯಂತ ಅಪಾಯಕಾರಿ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು. ಇದಕ್ಕೆ ನ್ಯಾ.ದೀಕ್ಷಿತ್ ಅವರು, ನೆರೆದಿದ್ದವರ ಮುಂದೆ ಆರೋಪಿಗಳು ನಾಯಕರಾಗಲು ಬಯಸುತ್ತಾರೆ. ಇದು ಸಾಮೂಹಿಕ ಮೂರ್ಖತನ, ಗ್ರಾಮಸ್ಥರ ಬೇಜವಾಬ್ದಾರಿತನ ಎಂದು ಕಟುವಾಗಿ ನುಡಿದರು.
ಇಂಥ ಘಟನೆಗಳನ್ನು ನಿಯಂತ್ರಿಸುವುದಾದರೂ ಹೇಗೆ? ನಾವು ನಾಗರಿಕ ಸಮಾಜ ಎಂದು ಹೇಳಿಕೊಳ್ಳುತ್ತೇವೆ. ಇದರಲ್ಲಿ ಗ್ರಾಮಸ್ಥರ ಪಾತ್ರ ಏನಿದೆ?, ಈ ಘಟನೆಗೆ ಜನರು ಏಕೆ ಮೂಕ ಪ್ರೇಕ್ಷಕರಾಗಿದ್ದರು ಎಂಬುದಕ್ಕೆ ಕಾರಣಗಳಿವೆಯೇ?, ಅವರು ಪೊಲೀಸ್, ನ್ಯಾಯಾಂಗ, ರಾಜಕೀಯ ವ್ಯಕ್ತಿಗಳಿಗೆ ಹೆದರಿದ್ದಾರೆಯೇ? ಎಂದು ಪ್ರಶ್ನಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಜನ ಏಕೆ ಅಪರಾಧದ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂಬ ಸಾಮಾಜಿಕ ಆಯಾಮವನ್ನು ನಿರ್ಲಕ್ಷಿಸಲಾಗದು. ತಮ್ಮನ್ನು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಿಲುಕಿಸಲಾಗುತ್ತದೆ. ತಮಗೆ ಸೂಕ್ತ ಗೌರವ ಸಿಗುವುದಿಲ್ಲ ಎಂದು ಸಾಕ್ಷಿಗಳು ಹೆದರುತ್ತಾರೆ ಎಂದು ಪ್ರಶ್ನಿಸಿದರು
ಅಲ್ಲದೆ, ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಇಡೀ ಗ್ರಾಮದಲ್ಲಿ ಯಾರು ಏಕೆ ಮುಂದೆ ಬರಲಿಲ್ಲ. ಅದು ಏಕೆ ಹಾಗಾಯಿತು. ಈ ವಿಚಾರಗಳನ್ನು ಸಂಗ್ರಹಿಸಬೇಕು. ಇದನ್ನು ಕಾನೂನು ಆಯೋಗಕ್ಕೆ ತಿಳಿಸಬೇಕು. ಅದು ಕಾನೂನು ರೂಪಿಸಲು ಸಲಹೆ ನೀಡಬಹುದು. ಈ ರೀತಿಯಲ್ಲಿ ಕಾನೂನು ಮುನ್ನಡೆಯುತ್ತದೆ. ಇಲ್ಲವಾದಲ್ಲಿ ಅದು ಜನರ ಕಾನೂನಾಗುವುದಿಲ್ಲ. ಜನರ ಬದುಕನ್ನು ಕಾನೂನು ಆಧರಿಸಿರಬೇಕು. ಆಗ ಅದಕ್ಕೆ ಅರ್ಥಬರುತ್ತದೆ. ಇಲ್ಲವಾದಲ್ಲಿ ಅದೊಂದು ಅಪರಿಚಿತ ದೇಹವಾಗಿಯೇ ಉಳಿದುಕೊಳ್ಳಲಿದೆ ಎಂದು ಪೀಠ ಅಸಮಾಧಾನದಿಂದ ತಿಳಿಸಿತು.