Home High Court/ಹೈಕೋರ್ಟ್ Belagavi Undressing Case: Victim Alloted Land Near Village: High Court Order to...

Belagavi Undressing Case: Victim Alloted Land Near Village: High Court Order to Submit Report| ಬೆಳಗಾವಿ ವಿವಸ್ತ್ರ ಪ್ರಕರಣದ ಸಂತ್ರಸ್ತೆಗೆ ಗ್ರಾಮದ ಸಮೀಪವೇ ಭೂಮಿ ಮಂಜೂರು: ವರದಿ ಸಲ್ಲಿಕೆಗೆ ಹೈಕೋರ್ಟ್ ಆದೇಶ

30
0
Karnataka High Court

ಬೆಂಗಳೂರು:

ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯ ವಿವಸ್ತ್ರ ಪ್ರಕರಣದ ತನಿಖೆಯು ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ ಎಂದು ರಾಜ್ಯ ಸರಕಾರವು ಹೈಕೋರ್ಟ್‍ಗೆ ತಿಳಿಸಿದೆ. ತನ್ನ ಗ್ರಾಮದ ಸಮೀಪದ ಭೂಮಿ ಮಂಜೂರು ಮಾಡುವಂತೆ ಸಂತ್ರಸ್ತೆ ಕೋರಿರುವುದಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.

ಸಂತ್ರಸ್ತ ಮಹಿಳೆಯ ಪುತ್ರ ಅದೇ ಗ್ರಾಮದ ಯುವತಿಯನ್ನು ಪ್ರೇಮಿಸಿ ಆಕೆಯೊಂದಿಗೆ ಪರಾರಿಯಾಗಿದ್ದ ಎನ್ನುವ ಹಿನ್ನೆಲೆಯಲ್ಲಿ ಯುವಕನ ತಾಯಿಯನ್ನು ಯುವತಿಯ ಕಡೆಯವರು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ಸ್ವಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ಇದರ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಿತು.

ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು ಮೆಮೊ ಸಲ್ಲಿಸಿದರು. ಇದರಲ್ಲಿ ಸಂತ್ರಸ್ತ ಮಹಿಳೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಬಹುತೇಕ ಪ್ರಕರಣದ ವಿಚಾರಣೆ ಪೂರ್ಣಗೊಂಡಿದೆ ಎಂದು ಪೀಠಕ್ಕೆ ತಿಳಿಸಿದರು. ಸಂತ್ರಸ್ತ ಮಹಿಳೆಯು ತನ್ನ ಗ್ರಾಮದ ಸಮೀಪ ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ಯೋಜನೆಯ ಅಡಿ ಜಮೀನು ನೀಡುವಂತೆ ಕೋರಿದ್ದಾರೆ. ಈ ಸಂಬಂಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಅಧಿಕಾರಿಗೆ ತಿಳಿಸಲಾಗಿದೆ ಎಂದು ವಿವರಿಸಿದರು.

ಇದನ್ನು ಆಲಿಸಿದ ಪೀಠವು ಸಂತ್ರಸ್ತ ಮಹಿಳೆಗೆ ನಗದಿನ ರೂಪದ ಪರಿಹಾರ ವಿತರಿಸಲಾಗಿದೆ. ಸಂತ್ರಸ್ತ ಮಹಿಳೆಯ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲ ಕ್ರಮಕೈಗೊಳ್ಳಲಾಗಿದೆ. ಸಶಸ್ತ್ರ ಪಡೆಯ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಸಂತ್ರಸ್ತೆಗೆ ಬೆಂಗಾವಲು ಒದಗಿಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಮಾಸಾಂತ್ಯದಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಿದ್ದಾರೆ. ತನ್ನ ಗ್ರಾಮದ ಸಮೀಪದ ಭೂಮಿ ಮಂಜೂರು ಮಾಡುವಂತೆ ಸಂತ್ರಸ್ತೆ ಕೋರಿರುವುದಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ವೇಳೆಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದ್ದು, ವಿಚಾರಣೆಯನ್ನು ಮೂರು ವಾರ ಮುಂದೂಡಿದೆ.

LEAVE A REPLY

Please enter your comment!
Please enter your name here