Home ಅಪರಾಧ Belagavi woman stripped and beaten; Karnataka High Court registers Suo Muto case...

Belagavi woman stripped and beaten; Karnataka High Court registers Suo Muto case | ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಥಳಿತ; ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಹೈಕೋರ್ಟ್

34
0
Karnataka High Court

ಬೆಂಗಳೂರು:

ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆ ಒಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಕರ್ನಾಟಕ ಹೈಕೋರ್ಟ್, ಘಟನೆಯ ವರದಿಗಾರಿಕೆಗೆ ಸಂಬಂಧಿಸಿದಂತೆ ಬೇಜವಾಬ್ದಾರಿ ಮತ್ತು ಅಸೂಕ್ಷ್ಮತೆ ಪ್ರದರ್ಶಿಸಲಾಗಿದೆ ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಆಂಗ್ಲ ದೈನಿಕಗಳಾದ ಡೆಕ್ಕನ್ ಹೆರಾಲ್ಡ್, ದಿ ಹಿಂದೂ ವರದಿಯ ಜೊತೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ‘ಓಡಿ ಹೋದ ಪ್ರೇಮಿಗಳು ಮಹಿಳೆ ಬೆತ್ತಲೆಗೊಳಿಸಿ ಥಳಿತʼ ಎಂಬ ತಲೆಬರಹದಡಿ ಸುದ್ದಿ ಪ್ರಕಟಿಸಲಾಗಿದ್ದು, ಅದರ ಜೊತೆಗಿನ ಚಿತ್ರ ಹಾಗೂ ಅಡಿಬರಹ ನಮ್ಮ ಆತ್ಮಸಾಕ್ಷಿಗೆ ಆಘಾತ ನೀಡಿದೆ ಎಂದು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಒಂದು ಕಡೆ ಈ ದೇಶದಲ್ಲಿ 76ನೇ ವರ್ಷದ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ನಡೆಸಲಾಗುತ್ತಿದೆ. ಇನ್ನೊಂದು ಕಡೆ ಮೈಸೂರು ರಾಜ್ಯ ಇದ್ದ ಕಾಲದಿಂದಲೂ ಸಕಾರಣಗಳಿಂದ ಪ್ರಗತಿಪರ ಮತ್ತು ಸಾಮಾಜಿಕ ನ್ಯಾಯ ಕಲ್ಪಿಸಿರುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಎಂದು ಗುರುತಿಸಿಕೊಂಡಿರುವ ರಾಜ್ಯದಲ್ಲಿ ಈ ಘಟನೆ ನಡೆದಿದೆ ಎಂದು ಪೀಠ ಅತೃಪ್ತಿ ವ್ಯಕ್ತಪಡಿಸಿದೆ.

ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಿಸಲಾಗಿರುವ ಚಿತ್ರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂತ್ರಸ್ತ ಮಹಿಳೆಗೆ ಸಮಾಧಾನ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮಗಳು ಚಿತ್ರ ಪ್ರಕಟಿಸುವಾಗ ಕನಿಷ್ಠ ಪಕ್ಷ ಸಂತ್ರಸ್ತೆಯ ಚಿತ್ರವನ್ನು ಬ್ಲರ್ ಮಾಡುವ ಮೂಲಕ ಸೂಕ್ಷ್ಮತೆ ಪ್ರದರ್ಶಿಸಿವೆ. ಆದರೆ, ಅದೇ ಚಿತ್ರದಲ್ಲಿ ಕಾಣುವ ಆಘಾತಕಾರಿ ಅಂಶ ಏನೆಂದರೆ ವಿದ್ಯುನ್ಮಾನ ಮಾಧ್ಯಮ ಅಥವಾ ಅವುಗಳ ಪ್ರತಿನಿಧಿಗಳು ಸಂತ್ರಸ್ತೆ ಮಹಿಳೆ ಘಟನೆ ವಿವರಿಸುವುದು ಮತ್ತು ಆಕೆಯ ಪ್ರತಿಕ್ರಿಯೆ ಚಿತ್ರ ಮತ್ತು ವಿಡಿಯೊ ಮಾಡಿದ್ದಾರೆ. ಒಂದು ಕಡೆ ಸೂಕ್ಷ್ಮತೆ ಪ್ರದರ್ಶನವಾಗಿದ್ದು, ಇನ್ನೊಂದು ಕಡೆ ಮಾಧ್ಯಮ ಪ್ರತಿನಿಧಿಗಳು ಬೇಜವಾಬ್ದಾರಿ ಮತ್ತು ಅಸೂಕ್ಷ್ಮತೆಯಿಂದ ನಡೆದುಕೊಂಡಿರುವುದು ವಿರೋಧಭಾಸದಿಂದ ಕೂಡಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಯಾವುದೇ ಮಾಧ್ಯಮ ಅಥವಾ ಅವರ ಪ್ರತಿನಿಧಿಯು ಸಚಿವರು ಭೇಟಿ ನೀಡಿದ್ದಾಗ ಸಂತ್ರಸ್ತೆಯ ಪ್ರತಿಕ್ರಿಯೆ ಪಡೆದಿರುವುದನ್ನು ರೆಕಾರ್ಡ್ ಮಾಡಿಕೊಂಡಿದ್ದರೆ ಅದನ್ನು ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ಸುದ್ದಿ ವಾಹಿನಿಗಳು ಪ್ರಸಾರ ಮಾಡಬಾರದು. ಈಗಾಗಲೇ ಆ ಸಂದರ್ಶನ ಪ್ರಸಾರ ಮಾಡಿದ್ದರೆ ಅದನ್ನು ಮರುಪ್ರಸಾರ ಮಾಡುವಂತಿಲ್ಲ. ಸಂತ್ರಸ್ತೆಯ ಘನತೆ ಕಾಪಾಡಲು, ಆಕೆಯ ಗುರುತು ಬಹಿರಂಗವಾಗುವುದನ್ನು ತಪ್ಪಿಸುವ ಏಕೈಕ ಉದ್ದೇಶದಿಂದ ಈ ಮಧ್ಯಂತರ ಆದೇಶ ಮಾಡಲಾಗಿದೆ. ಈ ಮಧ್ಯಂತರ ಆದೇಶದ ಮೂಲಕ ಮಾಧ್ಯಮಗಳನ್ನು ಸುದ್ದಿ ಪ್ರಸಾರ ಮಾಡುವುದಕ್ಕೆ ರಿಮೋಟ್ ಮೂಲಕ ನ್ಯಾಯಾಲಯ ನಿಷೇಧ ಹೇರುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದು, ನ್ಯಾಯಾಲಯವು ಮಾಧ್ಯಮ ಸ್ವಾತಂತ್ರ್ಯವನ್ನು ಒಪ್ಪುತ್ತದೆ” ಎಂದು ಹೇಳಿದೆ.

ಘಟನೆಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅನಗತ್ಯ ಪ್ರಚಾರ ನೀಡದಿರುವುದಕ್ಕೆ ಸಂಬಂಧಿಸಿದಂತೆ ತಕ್ಷಣ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಅಡ್ವೊಕೇಟ್ ಜನರಲ್ ತಿಳಿಸಿದ್ದಾರೆ. ಡಿಸೆಂಬರ್ 14ರ ಒಳಗೆ ಅಡ್ವೊಕೇಟ್ ಜನರಲ್ ಅವರು ಸ್ಥಿತಿಗತಿ ವರದಿ ಸಲ್ಲಿಸಬೇಕು. ರಿಜಿಸ್ಟ್ರಾರ್ ಜನರಲ್ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ನಿರ್ದೇಶಿಸಿದೆ.

LEAVE A REPLY

Please enter your comment!
Please enter your name here