ಬೆಂಗಳೂರು:- ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ನಲ್ಲಿ ಕನ್ನಡ ನಾಮಫಲಕ ಅಳವಡಿಸದ 18 ಅಂಗಡಿಗಳನ್ನು ಮುಚ್ಚಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಬಿಬಿಎಂಪಿಯ ಪೂರ್ವ ವಲಯ ಆಯುಕ್ತೆ ಸ್ನೇಹಲ್ ಆರ್ ಅವರ ಆದೇಶದ ಮೇರೆಗೆ ಆರೋಗ್ಯಾಧಿಕಾರಿ ಡಾ.ಸವಿತಾ ನೇತೃತ್ವದ ಅಧಿಕಾರಿಗಳ ತಂಡವು ಸಿಬಿಡಿ ವ್ಯಾಪ್ತಿಯ 200 ಅಂಗಡಿಗಳನ್ನು ಪರಿಶೀಲಿಸಿದ್ದು, ಆ ಪೈಕಿ 170 ಅಂಗಡಿಗಳಲ್ಲಿ ಈಗಾಗಲೇ ಕನ್ನಡ ನಾಮಫಲಕವನ್ನು ಅಳವಡಿಸಲಾಗಿದೆ.
ಕೆಲವರು ತಮ್ಮ ಅಂಗಡಿಯ ಇಂಗ್ಲಿಷ್ ನಾಮಫಲಕಗಳನ್ನು ಮುಚ್ಚಿಕೊಂಡು ಕನ್ನಡ ನಾಮಫಲಕ ಅಳವಡಿಸಲು ಕೆಲವು ದಿನಗಳ ಕಾಲಾವಕಾಶ ಕೋರಿದ್ದಾರೆ. ಆದಷ್ಟು ಬೇಗ ಕನ್ನಡದಲ್ಲಿ ಫಲಕಗಳನ್ನು ಹಾಕುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಕನ್ನಡ ಮಾಯವಾಗುತ್ತಿರುವ ಹೊತ್ತಲ್ಲೇ ಕನ್ನಡದ ಕೂಗು ಕಾವೇರಿತ್ತು. ಫೆಬ್ರವರಿ 28ರ ಒಳಗೆ ಶೇಕಡಾ 60ರಷ್ಟು ಕನ್ನಡ ಬೋರ್ಡ್ ಬಳಸುವಂತೆ ನಿಯಮ ಇದೆ. ನಿಯಮ ಪಾಲಿಸದಿದ್ದರೆ ಪರವಾನಗಿ ರದ್ದುಗೊಳಿಸಲು ಬಿಬಿಎಂಪಿ ಸೂಚಿಸಿದೆ. ಇದರ ವಿರುದ್ಧ ಕನ್ನಡಪರ ಸಂಘಟನೆಗಳು ಸಿಡಿದೆದ್ದಿದ್ದವು.
ಬೆಂಗಳೂರಿಗೆ ವಲಸೆ ಬಂದಿರುವ ಪರಭಾಷೆಯವರು ಅಂಗಡಿ, ಹೋಟೆಲ್ ಅಂತಾ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕನ್ನಡ ಭಾಷೆಯನ್ನ ನಿರ್ಲಕ್ಷಿಸಿದ್ದಾರೆ. ಕನ್ನಡಪರ ಸಂಘಟನೆ ನಾಡು, ನುಡಿಗಾಗಿ ಎಚ್ಚೆತ್ತುಕೊಂಡಿದ್ದು, ಕನ್ನಡ ನಾಮಫಲಕಕ್ಕಾಗಿ ಹೋರಾಟ ಆರಂಭಿಸಿದ್ದರು.