ಬೆಂಗಳೂರು : ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬ್ಯಾಡ್ಮಿಂಟನ್ ಕೋಚ್‍ವೊಬ್ಬರನ್ನು ಇಲ್ಲಿನ ಹುಳಿಮಾವು ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
16 ವರ್ಷದ ಬಾಲಕಿಯ ತಾಯಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು, ತಮಿಳುನಾಡು ಮೂಲದ ಸುರೇಶ್ ಬಾಲಾಜಿ(30) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.
ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದ ಎನ್ನಲಾದ ಆರೋಪಿಯ ಮೊಬೈಲ್ ಫೋನ್‍ನಲ್ಲಿ ಸಂತ್ರಸ್ತ ಬಾಲಕಿಯಲ್ಲದೆ, ಇನ್ನೂ ಕೆಲ ಬಾಲಕಿಯರ ಫೋಟೋ, ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮಗಳು ರಜಾ ದಿನಗಳನ್ನು ಕಳೆಯಲು ತನ್ನ ಅಜ್ಜಿಯ ಮನೆಗೆ ತೆರಳಿದ್ದಳು. ಅಪರಿಚಿತ ನಂಬರ್‍ನಿಂದ ಮೊಮ್ಮಗಳ ಫೋನ್‍ಗೆ ಬೆತ್ತಲೆ ಫೋಟೋ ರವಾನೆಯಾಗಿರುವುದನ್ನು ಗಮನಿಸಿದ್ದ ಅಜ್ಜಿ, ತಕ್ಷಣ ತಮಗೆ ಮಾಹಿತಿ ನೀಡಿದ್ದರು. ಬಳಿಕ ಮಗಳನ್ನು ವಿಚಾರಿಸಿದಾಗ ಸಾಕಷ್ಟು ಬಾರಿ ಬ್ಯಾಡ್ಮಿಂಟನ್ ಕೋಚ್, ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದು ಬಂದಿದೆ. ಅನೇಕ ಸಂದರ್ಭಗಳಲ್ಲಿ ಡ್ಯಾನ್ಸ್ ಕ್ಲಾಸ್, ಟ್ಯೂಷನ್ ತ್ಯಜಿಸಿ ಮಗಳು ಆರೋಪಿಯನ್ನು ಭೇಟಿ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ’ ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.