ಬೆಂಗಳೂರು: ಮೆಜೆಸ್ಟಿಕ್ನಿಂದ ಕಾಡುಗೋಡಿಗೆ ಹೊರಟಿದ್ದ ಬಿಎಂಟಿಸಿ ಬಸ್ ಇಂದು ಬೆಳಿಗ್ಗೆ ಎಚ್ಎಎಲ್ ಗೇಟ್ ಬಳಿ ಬೆಂಕಿಗೆ ಆಹುತಿಯಾಯಿತು. ಆದರೆ, ಚಾಲಕ ಮತ್ತು ನಿರ್ವಾಹಕರ ತಕ್ಷಣದ ಎಚ್ಚರಿಕೆಯಿಂದ 75ಕ್ಕೂ ಹೆಚ್ಚು ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಯಿತು.
ಘಟನೆ ಬೆಳಿಗ್ಗೆ 5.15ರ ಸುಮಾರಿಗೆ ನಡೆದಿದೆ. ಬಸ್ನ ಇಂಜಿನ್ ಹತ್ತಿರ ಹೊಗೆ ಕಾಣಿಸಿಕೊಂಡ ತಕ್ಷಣ ಚಾಲಕರು ವಾಹನವನ್ನು ನಿಲ್ಲಿಸಿ ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಸಿದರು. ಕೇವಲ ಕೆಲವೇ ನಿಮಿಷಗಳಲ್ಲಿ ಇಡೀ ಬಸ್ ಬೆಂಕಿಗೆ ಆಹುತಿಯಾಯಿತು.
ಮೆಜೆಸ್ಟಿಕ್ನಿಂದ ಬೆಳಿಗ್ಗೆ 4.15ಕ್ಕೆ ಹೊರಟಿದ್ದ ಬಸ್, ಎಚ್ಎಎಲ್ ಸ್ಕೈವಾಕ್ ಹತ್ತಿರ ತಲುಪುವಷ್ಟರಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಬಿಎಂಟಿಸಿ ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದು, ಚಾಲಕ ಹಾಗೂ ನಿರ್ವಾಹಕರ ಜಾಗೃತಿಯಿಂದ ದೊಡ್ಡ ಅವಘಡ ತಪ್ಪಿದೆಯೆಂದು ಶ್ಲಾಘಿಸಿದೆ.
