ಬೆಂಗಳೂರು: ದಸರಾ ಹಬ್ಬದ ಆಯುಧ ಪೂಜೆ ಮತ್ತು ವಿಜಯದಶಮಿ ಸಂಭ್ರಮದ ವೇಳೆ ಹೂವು, ಬಾಳೆಕಂದು, ಬೂದು ಕುಂಬಳಕಾಯಿಗಳ ವ್ಯಾಪಾರ ನಗರಾದ್ಯಂತ ಭರ್ಜರಿಯಾಗಿ ಜರುಗಿದರೂ, ಹಬ್ಬದ ಬಳಿಕ ನಗರದ ಚಿತ್ರವೇ ಬದಲಾಗಿದೆ. ರಸ್ತೆ ಬದಿಗಳಲ್ಲಿ ಹೂವಿನ ತ್ಯಾಜ್ಯ, ಕೊಳೆತ ತರಕಾರಿ, ಪ್ಲಾಸ್ಟಿಕ್ ಚೀಲಗಳು ರಾಶಿಯಾಗಿ ಬಿದ್ದಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಕೆ.ಆರ್. ಮಾರ್ಕೆಟ್ ಸೇರಿ ಹಲವು ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಟ್ರಕ್ಗಟ್ಟಲೆ ಹೂವು-ಹಣ್ಣು ಮತ್ತು ಬಾಳೆಕಂದುಗಳನ್ನು ತಂದು ಮಾರಾಟ ಮಾಡಿದರು. ಆದರೆ ಮಾರಾಟವಾಗದ ಉಳಿದ ವಸ್ತುಗಳನ್ನು ನೇರವಾಗಿ ರಸ್ತೆಯ ಮೇಲೆ ಸುರಿದು ಹೋದ ಪರಿಣಾಮ, ಇಂದು ನಗರವೇ ಕಸದ ಗುಡ್ಡೆಯಂತೆ ಮಾರ್ಪಟ್ಟಿದೆ.
ಸ್ಥಳೀಯರು “ಬಾಳೆಕಂದು, ಬೂದು ಕುಂಬಳಕಾಯಿ, ಹೂವಿನ ತ್ಯಾಜ್ಯ ಎಲ್ಲೆಡೆ ಬಿದ್ದಿದೆ. ಹಿರಿಯರು ನಡೆಯುವುದಕ್ಕೂ ಸಾಧ್ಯವಾಗುತ್ತಿಲ್ಲ. ವ್ಯಾಪಾರಿಗಳು ಮಾರಾಟವಾಗದ ವಸ್ತುಗಳನ್ನು ರಸ್ತೆಯಲ್ಲಿ ಎಸೆದು ಹೋಗುತ್ತಿದ್ದಾರೆ. ಅಧಿಕಾರಿಗಳು ತಲೆಕೆಡಿಸಿಕೊಳ್ಳದೇ ಹಬ್ಬದ ಊಟದಲ್ಲಿ ಬ್ಯುಸಿ ಇದ್ದಾರೆ” ಎಂದು ಕಿಡಿಕಾರಿದ್ದಾರೆ.
ಸ್ವಚ್ಛತೆ ನಿರ್ವಹಣೆಯಲ್ಲಿನ ವೈಫಲ್ಯವನ್ನು ನಾಗರಿಕರು ಗಂಭೀರವಾಗಿ ಪ್ರಶ್ನಿಸುತ್ತಿದ್ದು, “ನಮ್ಮ ಬೆಂಗಳೂರನ್ನು ಕಾರ್ಪೊರೇಟ್ ಸಿಟಿ ಎಂದು ಹೇಳ್ತಾರೆ, ಆದರೆ ಈಗ ಗಾರ್ಬೇಜ್ ಸಿಟಿ ಆಗಿಬಿಟ್ಟಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಸರ ಹಿತಚಿಂತಕರು, ಪ್ರತಿಯೊಂದು ಹಬ್ಬದ ಬಳಿಕವೂ ತ್ಯಾಜ್ಯ ನಿರ್ವಹಣೆಯಲ್ಲಿ ವ್ಯವಸ್ಥಿತ ಕ್ರಮಗಳ ಕೊರತೆಯಿಂದ ಬೆಂಗಳೂರಿನ ಇಮೇಜ್ ಹಾಳಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಈಗಾದರೂ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ನಗರವನ್ನು ಕಸದ ಬಾಧೆಯಿಂದ ಮುಕ್ತಗೊಳಿಸುತ್ತಾರೆಯೇ? ಎಂಬುದನ್ನು ಕಾದು ನೋಡಬೇಕು.
