ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಸ್ವಯಂ ಜನಗಣತಿಯಲ್ಲಿ ಭಾಗ: ನಾಗರಿಕರಿಗೆ ಡಿಜಿಟಲ್ ಗಣತಿಗೆ ಕರೆ
ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಜನಗಣತಿ–2027ರ ಸ್ವಯಂ ಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಕರೆ ನೀಡಿದ್ದಾರೆ.
ಭಾರತದ ಜನಗಣತಿ–2027 ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯುತ್ತಿದ್ದು, ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ನಾಗರಿಕರು ಏಪ್ರಿಲ್ 1ರಿಂದ ಏಪ್ರಿಲ್ 15, 2026ರವರೆಗೆ ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ https://se.census.gov.in ವೆಬ್ ಪೋರ್ಟಲ್ನಲ್ಲಿ 10–15 ನಿಮಿಷಗಳಲ್ಲಿ ಸ್ವಯಂ ಗಣತಿ ಪೂರ್ಣಗೊಳಿಸಬಹುದು.
ಸ್ವಯಂ ಗಣತಿಯಲ್ಲಿ ಭಾಗವಹಿಸುವುದರಿಂದ ನಗರದ ವಸತಿ, ಮೂಲಸೌಕರ್ಯ ಮತ್ತು ಸಾರ್ವಜನಿಕ ಸೇವೆಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಆಯುಕ್ತರು ಮನವಿ ಮಾಡಿದ್ದಾರೆ.

ಎಂ.ಜಿ. ರಸ್ತೆಯ ಪಿ.ಯು.ಬಿ ಕಟ್ಟಡದ ಕೆನೋಪಿ ಹಾಲ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಾಜೇಂದ್ರ ಚೋಳನ್, ಜನಗಣತಿ ಕಾರ್ಯವನ್ನು ಎಲ್ಲಾ ಇಲಾಖೆಗಳು ತಂಡದ ರೂಪದಲ್ಲಿ ಸಮನ್ವಯದಿಂದ ನಿರ್ವಹಿಸಿ ಯಾವುದೇ ದೋಷಗಳಿಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚಿಸಿದರು.
ಜನಗಣತಿ ತರಬೇತಿಗಾಗಿ ಸಿ.ವಿ. ರಾಮನ್ ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ಚಾಮರಾಜಪೇಟೆ ಮತ್ತು ಚಿಕ್ಕಪೇಟೆ ಸೇರಿದಂತೆ 6 ವಿಧಾನಸಭಾ ಕ್ಷೇತ್ರಗಳಲ್ಲಿ ತರಬೇತಿ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರತಿ ಕೇಂದ್ರದ ಮೇಲ್ವಿಚಾರಣೆಗೆ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ 10 ಅಧಿಕಾರಿಗಳ ತಂಡಗಳನ್ನು ನೇಮಕ ಮಾಡಲಾಗಿದೆ.
ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಏಪ್ರಿಲ್ 6ರಿಂದ ಏಪ್ರಿಲ್ 8ರವರೆಗೆ ತರಬೇತಿ ನೀಡಲಾಗುತ್ತದೆ. ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ತಿಳಿಸಲಾಗಿದ್ದು, ಗೈರಾಗುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಜನಗಣತಿ ಕಾಯ್ದೆ 1948ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023ರ ಅಡಿಯಲ್ಲಿ FIR ದಾಖಲಿಸುವುದು, ಅಮಾನತು ಹಾಗೂ ಶಿಸ್ತು ಕ್ರಮ ಕೈಗೊಳ್ಳುವುದು ಸೇರಿದಂತೆ ಕಠಿಣ ಕ್ರಮ ಜರುಗಿಸಲಾಗುತ್ತದೆ. ಅನಧಿಕೃತ ಗೈರುಹಾಜರಿಯನ್ನು ‘ಡೀಸ್ ನಾನ್’ ಎಂದು ಪರಿಗಣಿಸಲಾಗುತ್ತದೆ.
ಮನೆಪಟ್ಟಿ ಮತ್ತು ವಸತಿ ಗಣತಿ ಕಾರ್ಯವು ಏಪ್ರಿಲ್ 16ರಿಂದ ಮೇ 15, 2026ರವರೆಗೆ ನಡೆಯಲಿದೆ.
ಸಭೆಯಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಕಂದಾಯ ಅಪರ ಆಯುಕ್ತರಾದ ಕೆ. ರಂಗನಾಥ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
