ಬೆಂಗಳೂರು: ಹುಡುಗರ ವೇಷ ಧರಿಸಿಕೊಂಡು ಹಗಲು ವೇಳೆಯಲ್ಲೇ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಯುವತಿಯರನ್ನು ಸಂಪಿಗೆಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳನ್ನು ಟ್ಯಾನರಿ ರಸ್ತೆ ನಿವಾಸಿಗಳಾದ ಶಾಲು (27) ಮತ್ತು ನೀಲು (29) ಎಂದು ಗುರುತಿಸಲಾಗಿದೆ. ಪೊಲೀಸರು ನೀಡಿದ ಮಾಹಿತಿಯಂತೆ, ಈ ಇಬ್ಬರು ಯುವತಿಯರು ಪ್ಯಾಂಟ್, ಶರ್ಟ್ ಹಾಗೂ ಟೋಪಿ ಧರಿಸಿ ಹುಡುಗರಂತೆ ವೇಷ ಬದಲಿಸಿಕೊಂಡು ದ್ವಿಚಕ್ರ ವಾಹನದಲ್ಲಿ ನಗರದಲ್ಲಿ ಸಂಚರಿಸುತ್ತಿದ್ದರು.
ನಿರ್ಜನ ಪ್ರದೇಶಗಳು ಹಾಗೂ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ಮನೆಮಾಲೀಕರು ಹೊರಗಿರುವ ವೇಳೆ ಕಳ್ಳತನ ಮಾಡುವುದು ಇವರ ರೂಢಿಯಾಗಿತ್ತು. ಹಗಲು ವೇಳೆಯಲ್ಲಿ ಸಂಚರಿಸುತ್ತಿದ್ದರಿಂದ ಯಾವುದೇ ಅನುಮಾನ ಮೂಡಿಸದೇ ಕಳ್ಳತನ ನಡೆಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಈ ಪ್ರಕರಣವು ಜನವರಿ 13ರಂದು ಸಂಪಿಗೆಹಳ್ಳಿಯ ನಿವಾಸಿ ಸಂಗಮೇಶ್ ಅವರ ಮನೆಯಲ್ಲಿ ನಡೆದ ಕಳ್ಳತನದ ಬಳಿಕ ಬೆಳಕಿಗೆ ಬಂದಿದೆ. ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿ, ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದರು.
ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು ಹುಡುಗರು ನಡೆದುಕೊಂಡು ಹೋಗುತ್ತಿರುವಂತೆ ಕಾಣಿಸಿಕೊಂಡಿದ್ದು, ಅದೇ ಪ್ರಮುಖ ಸುಳಿವು ಆಯಿತು. ಆದರೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅವರು ಹುಡುಗರಲ್ಲದೆ ಹುಡುಗಿಯರು ಎಂಬುದು ಪೊಲೀಸರಿಗೆ ತಿಳಿದುಬಂದಿದೆ.
ವಿಚಾರಣೆಯಲ್ಲಿ ಆರೋಪಿಗಳು ಹುಡುಗರ ವೇಷ ಧರಿಸಿಕೊಂಡು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಇಬ್ಬರು ಯುವತಿಯರು ಇನ್ನಿತರ ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
