ಬೆಂಗಳೂರು: ಕುಂದಲಹಳ್ಳಿಯ ಬ್ರೂಕಫೀಲ್ಡ್ ಪ್ರದೇಶದಲ್ಲಿರುವ ಸೆವೆನ್ ಹಿಲ್ಸ್ ಸಾಯಿ ಕೋ–ಲಿವಿಂಗ್ ಪಿಜಿಯಲ್ಲಿ ಬುಧವಾರ ಸಂಜೆ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಪೋಟದಲ್ಲಿ 23 ವರ್ಷದ ಯುವಕನೊಬ್ಬ ಸಾವನ್ನಪ್ಪಿದ್ದು, ಇನ್ನೂ ಮೂವರು ಗಾಯಗೊಂಡಿದ್ದಾರೆ.
ಘಟನೆ ಸಂಜೆ ಸುಮಾರು 6 ಗಂಟೆ ಸುಮಾರಿಗೆ ನಡೆದಿದೆ. ಪಿಜಿಯ ನೆಲಮಹಡಿಯ ಅಡುಗೆಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ನಿಂದ ಲೀಕೇಜ್ ಸಂಭವಿಸಿ ಸ್ಪೋಟ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಪೋಟದ ವೇಳೆ ಅಡುಗೆಮನೆಯೊಳಗೆ ಕೆಲಸ ಮಾಡುತ್ತಿದ್ದ ಅರವಿಂದ್ (23) ಎಂಬ ಯುವಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನೊಬ್ಬರಾದ ವೆಂಕಟೇಶ್ ಅವರಿಗೆ ಶೇಕಡಾ 50ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ದೇವಿ ಮತ್ತು ವಿಶಾಲ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೂವರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಗ್ಯಾಸ್ ಲೀಕ್ನಿಂದಲೇ ಸಿಲಿಂಡರ್ ಸ್ಪೋಟ ಸಂಭವಿಸಿದೆ ಎನ್ನಲಾಗಿದೆ. ಸ್ಪೋಟದ ನಂತರ ಪೊಲೀಸರು ಪಿಜಿಯಲ್ಲಿದ್ದ ಎಲ್ಲಾ ನಿವಾಸಿಗಳನ್ನು ಹೊರಕ್ಕೆ ಕಳುಹಿಸಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
ಈ ಪಿಜಿಯಲ್ಲಿ ಸುಮಾರು 40–50 ಮಂದಿ ವಾಸವಿದ್ದು, ಅವರನ್ನು ತಾತ್ಕಾಲಿಕವಾಗಿ ಬೇರೆಡೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ.
ಸ್ಥಳಕ್ಕೆ ಎಚ್ಎಲ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್, ಎಸಿಪಿ ಹಾಗೂ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ.
ಈ ಘಟನೆಗೆ ನಿರ್ಲಕ್ಷ್ಯ ಅಥವಾ ಸುರಕ್ಷತಾ ಲೋಪ ಕಾರಣವಾಗಿದೆಯೇ ಎಂಬುದರ ಕುರಿತು ತನಿಖೆ ಮುಂದುವರೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
