ಅಧಿಕಾರ ಹಂಚಿಕೆ ಚರ್ಚೆ ಪಕ್ಷ ವಿರೋಧಿ ಕೆಲಸ: ಡಿಸಿಎಂ ಡಿ.ಕೆ. ಶಿವಕುಮಾರ್ – ಸಿಎಂ ಸಿದ್ದರಾಮಯ್ಯ ಮಾತೇ ಅಂತಿಮ, ಶಾಸಕರಿಗೆ ನೋಟಿಸ್ ಸೂಚನೆ
ಬೆಂಗಳೂರು, ಅ.02: ಅಧಿಕಾರ ಹಂಚಿಕೆ ವಿಚಾರವಾಗಿ ಯಾವುದೇ ಚರ್ಚೆ ಪಕ್ಷದ ಶಿಸ್ತುಗೆ ವಿರುದ್ಧವಾಗಿದೆ, ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, “ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಎಂಬುದು ಇಲ್ಲ. ಈ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಶಾಸಕ ರಂಗನಾಥ್, ಶಿವರಾಮೇಗೌಡ ಸೇರಿದಂತೆ ಮಾತನಾಡಿದವರಿಗೆ ನೋಟಿಸ್ ನೀಡಲು ಸೂಚಿಸಿದ್ದೇನೆ,” ಎಂದು ಸ್ಪಷ್ಟಪಡಿಸಿದರು.
ಅವರು KPCC ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರಿಗೆ ನೇರ ಸೂಚನೆ ನೀಡಿರುವುದಾಗಿ ತಿಳಿಸಿದರು. “ಸಿದ್ದರಾಮಯ್ಯ ಪರವಾಗಿ ಮಾತನಾಡಿದರೂ ಪಕ್ಷಕ್ಕೆ ಹಾನಿ, ನನ್ನ ಪರವಾಗಿ ಮಾತನಾಡಿದರೂ ಹಾನಿಯೇ. ಅಂತಿಮ ನಿರ್ಧಾರ ಹೈಕಮಾಂಡ್ದ್ದೇ, ಸಿದ್ದರಾಮಯ್ಯ ಅವರ ಮಾತೇ ಅಂತಿಮ,” ಎಂದು ಹೇಳಿದರು.
ಶಿವಕುಮಾರ್ ಪಕ್ಷದ ಶಿಸ್ತಿನ ಮಹತ್ವವನ್ನು ಒತ್ತಿ ಹೇಳಿದರು. “ಶಿಸ್ತು ಇಲ್ಲದೆ ಪಕ್ಷ ಉಳಿಯುವುದಿಲ್ಲ. ನಾವು ಹೈಕಮಾಂಡ್ ಹೇಳಿದಂತೆ ನಡೆವ ಶಿಸ್ತಿನ ಸಿಪಾಯಿಗಳು,” ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ “ನವೆಂಬರ್ ಕ್ರಾಂತಿ ಫಿಕ್ಸ್” ಆಗಿದೆ ಎಂದು ಬಿಜೆಪಿ ನಾಯಕರು ಹೇಳಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, “ಬಿಜೆಪಿ ತಮ್ಮ ಆಂತರಿಕ ಸಮಸ್ಯೆಗಳನ್ನು ನೋಡಿಕೊಳ್ಳಲಿ. ಅವರಿಗೆ ಸೂಕ್ತ ವೈದ್ಯರನ್ನು ಕಳುಹಿಸಿಕೊಡಲು ನಾನು ಸಿದ್ಧ. ತಮ್ಮ ಪಕ್ಷದ ಹರುಕುಗಳನ್ನು ಹೊಲಿದುಕೊಳ್ಳಲಿ,” ಎಂದು ತಿರುಗೇಟು ನೀಡಿದರು.
ಆರ್ಎಸ್ಎಸ್ ಶತಮಾನೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಅದು ಅವರ ವಿಚಾರ. ನಮ್ಮ ವಿಚಾರ ಗಾಂಧೀಜಿ ಅವರ ಸಂದೇಶ – ಈಶ್ವರ ಅಲ್ಲಾ ತೇರೆ ನಾಮ್. ನಮ್ಮ ನಾಡಗೀತೆಯಲ್ಲೂ ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರಸಿ, ಜೈನರ ಸಮಾನತೆಗೆ ಮಹತ್ವ ನೀಡಲಾಗಿದೆ. ಇವುಗಳಿಂದ ತಪ್ಪಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಿಲ್ಲ,” ಎಂದರು.
ಇದಕ್ಕೂ ಮೊದಲು ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್, “ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿದ ಶಿವರಾಮೇಗೌಡ, ಶಾಸಕ ರಂಗನಾಥ್ ಅವರಿಗೆ ನೋಟಿಸ್ ನೀಡಲು ಸೂಚಿಸಿದ್ದೇನೆ. ಪಕ್ಷದ ಶಿಸ್ತಿಗೆ ಧಕ್ಕೆ ತರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಎಚ್ಚರಿಕೆ ನೀಡಿದರು.
