Home ಅಪರಾಧ Bengaluru Fraud case, 14 accused arrested | ವಂಚನೆ ಪ್ರಕರಣ: 14 ಮಂದಿ ಆರೋಪಿಗಳ...

Bengaluru Fraud case, 14 accused arrested | ವಂಚನೆ ಪ್ರಕರಣ: 14 ಮಂದಿ ಆರೋಪಿಗಳ ಬಂಧನ

25
0
Bangalore Police Commissioner office

ಬೆಂಗಳೂರು:

ನಗರದಲ್ಲಿ ಪೊಲೀಸರ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಫೆಡ್ ಎಕ್ಸ್ ಕಂಪೆನಿಯ ಹೆಸರಿನಲ್ಲಿ ಕರೆ ಮಾಡಿ ‘ನಿಮ್ಮ ಕೊರಿಯರ್ ನಲ್ಲಿ ಅಕ್ರಮ ವಸ್ತುಗಳಿವೆ, ಪ್ರಕರಣ ದಾಖಲಾಗಿದೆ’ ಎಂದು ಬೆದರಿಸಿ ಲಕ್ಷಾಂತರ ರೂ. ವಂಚಿಸುತ್ತಿದ್ದ 14 ಆರೋಪಿಗಳನ್ನು ಬಂಧಿಸಿರುವುದು ವರದಿಯಾಗಿದೆ.

ಬಂಧಿತ ಆರೋಪಿಗಳು ಕೇರಳ, ಗುಜರಾತ್, ರಾಜಸ್ಥಾನ ಮೂಲದವರು ಎಂದು ಗುರುತಿಸಲಾಗಿದೆ. ಆರೋಪಿಗಳ ಖಾತೆಯಲ್ಲಿದ್ದ 25.47 ಲಕ್ಷ ರೂ. ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಫೋನ್‍ಗಳು, ಲ್ಯಾಪ್‍ಟಾಪ್‍ಗಳನ್ನು ವಶಕ್ಕೆ ಪಡೆಯಲಾಗಿದೆ.

ಐವಿಆರ್ (ಇಂಟರ್ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್) ಮೂಲಕ ಫೆಡ್ ಎಕ್ಸ್ ಕೊರಿಯರ್ ಕಂಪೆನಿಯ ಪ್ರತಿನಿಧಿಗಳ ಸೋಗಿನಲ್ಲಿ ಕರೆ ಮಾಡುತ್ತಿದ್ದ ಆರೋಪಿಗಳು, ‘ನೀವು ಕಳುಹಿಸಿರುವ ನಿಷೇಧಿತ ಪದಾರ್ಥಗಳಿರುವ ಕೊರಿಯರ್ ಅನ್ನು ಮುಂಬೈ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ’ ಎನ್ನುತ್ತಿದ್ದರು.

ಇದಾದ ಕೆಲವೇ ಕ್ಷಣಗಳಲ್ಲಿ ಇನ್ನೊಂದು ನಂಬರ್ ಮೂಲಕ ಕರೆ ಮಾಡುತ್ತಿದ್ದ ಅದೇ ಆರೋಪಿಗಳು ‘ಮುಂಬೈ ಪೊಲೀಸ್ ಅಥವಾ ಇತರೆ ತನಿಖಾಧಿಕಾರಿಗಳ  ಹೆಸರಿನಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಲಿದೆ. ಆದ್ದರಿಂದ ನಿಮ್ಮನ್ನು ವಿಚಾರಣೆಗೊಳಪಡಿಸಬೇಕಿದೆ’ ಎಂದು ಬೆದರಿಸುತ್ತಿದ್ದರು. ಬಳಿಕ ಕೆಲವೊಮ್ಮೆ ಹಣ ವರ್ಗಾಯಿಸಿಕೊಂಡರೆ, ಇನ್ನೂ ಕೆಲವೊಮ್ಮೆ ಬ್ಯಾಂಕ್ ಖಾತೆಗಳು ಹಾಗೂ ವೈಯಕ್ತಿಕ ದಾಖಲೆಗಳನ್ನ ಪಡೆದು ಆನ್‍ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸುತ್ತಿದ್ದರು.

ಈ ಮಾದರಿಯ ಪ್ರಕರಣಗಳು ಅಧಿಕವಾಗುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ, ಈ ಒಂದು ವರ್ಷಗಳ ಅವಧಿಯಲ್ಲಿ ದಾಖಲಾಗಿದ್ದ ಸುಮಾರು 330 ಪ್ರಕರಣಗಳ ಸಮಗ್ರ ತನಿಖೆ ನಡೆಸಲಾಗಿ ರಾಜಸ್ಥಾನ ಮೂಲದ ಲಲಿತ್ ಕುಮಾರ್, ರಮೇಶ್ ಕುಮಾರ್, ದಿಲೀಪ್ ಸೋನಿ, ಗುಜರಾತ್ ಕಾಂಜಿ ಭಾಯಿ ರಬಾರಿ, ಕರ್ನಾಟಕದ ಭಟ್ಕಳ ಮೂಲದ ಅಸೀಂ ಅಪಂದಿ, ಮುಹಮ್ಮದ್ ಸಲೀಂ ಸೈಫ್, ಕೇರಳ ಮೂಲದ ನೌಫಲ್ ಕೆ.ಪಿ, ರಿಯಾಜ್ ಕೆ.ಎಸ್, ನೌಫಲ್, ಅರ್ಷದ್ ಹಾಗೂ ಆಶಿಕ್ ಎಂ.ಪಿ ಸೇರಿದಂತೆ ಒಟ್ಟು ಹದಿನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳ ಬಂಧನದಿಂದ ಬೆಂಗಳೂರು ನಗರದಲ್ಲಿ ದಾಖಲಾಗಿದ್ದ ಆರು ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು 2.10 ಕೋಟಿ ರೂ.ನಷ್ಟು ವಂಚನೆಯಾಗಿರುವುದು ತಿಳಿದು ಬಂದಿದೆ. ಹಾಗೆಯೇ ನ್ಯಾಷನಲ್ ಸೈಬರ್ ಕ್ರೈಂ ಪೋರ್ಟಲ್ ಹೆಲ್ಸ್ ಲೈನ್ ಮೂಲಕ ವರದಿಯಾಗಿದ್ದ 546 ಪ್ರಕರಣಗಳಲ್ಲಿ ಆರೋಪಿಗಳ ಕೈವಾಡ ಇರುವುದಾಗಿ ಮಾಹಿತಿ ಸಿಕ್ಕಿದೆ. ಈ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಇನ್ನೂ ಕೆಲವು ಆರೋಪಿಗಳಿಗಾಗಿ ಪತ್ತೆಕಾರ್ಯ ಮುಂದುವರೆದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here