ಬೆಂಗಳೂರು, ಫೆ. 11: ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ (ದಕ್ಷಿಣ ವಲಯ) ತಂಡವು ಸರಕು ಮತ್ತು ಸೇವಾ ತೆರಿಗೆಗಳ ವಿಭಾಗ-5 ಬೆಂಗಳೂರು ಅಧಿಕಾರಿಗಳ ಸಹಯೋಗದಲ್ಲಿ ಬೆಂಗಳೂರು ನಗರದಲ್ಲಿನ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಭಾರೀ ದಾಳಿ ನಡೆಸಿದೆ. ಯಲಹಂಕ, ಕಲ್ಯಾಣನಗರ, ಹೆಬ್ಬಾಳ, ಬಾಣಸವಾಡಿ, ಇಂದಿರಾನಗರ ಹಾಗೂ ದೇವನಹಳ್ಳಿ ಸೇರಿದಂತೆ ವಿವಿಧ ವ್ಯಾಪಾರ ಕೇಂದ್ರಗಳಲ್ಲಿ ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಈ ಸಂಯುಕ್ತ ದಾಳಿಯಲ್ಲಿ ಸರಕು ಸಾಗಣೆ ಏಜನ್ಸಿಗಳು, ನಿರ್ಮಾಣ ಸಾಮಾಗ್ರಿ ಸರಬರಾಜುದಾರರು, ಎಲೆಕ್ಟ್ರಾನಿಕ್ಸ್ ವ್ಯಾಪಾರಿಗಳು, ವಾಹನ ಬಿಡಿಭಾಗ ವಿತರಕರು ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಲೆಕ್ಕಪತ್ರಗಳನ್ನು ಪರಿಶೀಲಿಸಲಾಗಿದೆ. ತಪಾಸಣೆಯ ವೇಳೆ ಹಲವರು ತೊಟ್ಟಿ ಹೂಡುವಳಿ ತೆರಿಗೆಯನ್ನು (Input Tax Credit) ದುರುಪಯೋಗ ಮಾಡಿಕೊಂಡು ನಗದು ರೂಪದಲ್ಲಿ ಪಾವತಿಸಬೇಕಾದ ತೆರಿಗೆ ತಪ್ಪಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಸ್ವಯಂ ಘೋಷಣೆ ಮಾಡಿದ ತೆರಿಗೆ ಭಾದ್ಯತೆ ಮತ್ತು ನಿಜವಾದ ವಹಿವಾಟಿನ ಲೆಕ್ಕಾಚಾರಗಳ ನಡುವೆ ಗಣನೀಯ ವ್ಯತ್ಯಾಸವೂ ಪತ್ತೆಯಾಗಿದೆ. ಇಲಾಖೆಯ ಪ್ರಾಥಮಿಕ ಅಂದಾಜು ಪ್ರಕಾರ ಈಗಾಗಲೇ ಸುಮಾರು ₹25 ಕೋಟಿ ಮೌಲ್ಯದ ತೆರಿಗೆ ವಂಚನೆ ವ್ಯವಹಾರ ಬೆಳಕಿಗೆ ಬಂದಿದೆ. ಇನ್ನಷ್ಟು ಪ್ರಕರಣಗಳಲ್ಲಿ ಲೆಕ್ಕಪತ್ರ ಪರಿಶೀಲನೆ ಮುಂದುವರಿದಿದ್ದು, ತೆರಿಗೆ ಸೋರಿಕೆಯ ನಿಖರ ಮೊತ್ತದ ಲೆಕ್ಕಾಚಾರ ನಡೆಯುತ್ತಿದೆ.
ವಾಣಿಜ್ಯ ತೆರಿಗೆ ಅಪರ ಆಯುಕ್ತರು (ಜಾರಿ), ದಕ್ಷಿಣ ವಲಯ, ಕೋರಮಂಗಲ, ಬೆಂಗಳೂರು, ಕನಿಷ್ಕಾ ಅವರ ಮಾರ್ಗದರ್ಶನದಲ್ಲಿ 35 ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಅಧಿಕಾರಿಗಳ ಪ್ರಕಾರ, ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಇಂತಹ ದಾಳಿಗಳು ಇನ್ನಷ್ಟು ತೀವ್ರಗೊಳ್ಳಲಿವೆ.
