ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಹಲವು ಭಾಗಗಳ ರಸ್ತೆಗಳಲ್ಲಿ ನೀರು ನಿಂತಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಇಲ್ಲಿನ ಕಾರ್ಪೋರೇಷನ್, ನಾಗಸಂದ್ರ, ಕೆಂಗೇರಿ, ಜಯನಗರ, ಬನಶಂಕರಿ, ಜೆಪಿ ನಗರ ಮತ್ತು ನಗರದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.
ಇನ್ನೊಂದೆಡೆ ಮರಗಳ ಕೊಂಬೆಗಳು, ಮರಗಳು ರಸ್ತೆ, ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಸಂಚಾರ ಹಾಗೂ ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗಿದೆ.
ಮಳೆಯಿಂದಾಗಿ ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಬಿಎಂಟಿಸಿ ಬಸ್ಸುಗಳು ತಡವಾಗಿ ಸಂಚರಿಸುತ್ತಿದ್ದು, ಕಾರ್ಮಿಕರ ದಿನದಂದೂ ಕೆಲಸ ತೆರಳಿದ್ದ ಒಂದಿಷ್ಟು ಉದ್ಯೋಗಿಗಳಿಗೆ ಕೆಲಸ ಬಿಡುವ ವೇಳೆಗೆ ಸುರಿದ ಮಳೆ ಮನೆಗೆ ತೆರಳಲು ಅಡ್ಡಿ ಉಂಟು ಮಾಡಿದೆ.
ಮೇ 1ರಂದು ಸಂಜೆಯಿಂದಲೇ ಗುಡುಗು-ಮಿಂಚು ಸಹಿತ ಭಾರೀ ಗಾಳಿ ಮಳೆ ಆರಂಭವಾಗಿದ್ದರಿಂದ ನಗರದ ಹಲವು ಕಡೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಹಲವು ಭಾಗಗಳ ರಸ್ತೆಗಳಲ್ಲಿ ನೀರು ನಿಂತಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಭಾರಿ ಮಳೆ ಸುರಿದಿದ್ದು, ಮರ ಬಿದ್ದು ಆಟೋ ಚಾಲಕ ಸಾವನ್ನಪ್ಪಿರುವ ಧಾರುಣ ಘಟನೆ ವರದಿಯಾಗಿದೆ.ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಈ ಘಟನೆ ನಡೆದಿದ್ದು, ಭಾರಿ, ಗಾಳಿ ಮಳೆಗೆ ಆಟೋದ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕತ್ರಿಗುಪ್ಪೆಯ ಎಂ.ಎಂ.ಬಾರ್ ಬಳಿ ಘಟನೆ ನಡೆದಿದ್ದು, ಮಳೆ ಮತ್ತು ಗಾಳಿಯಿಂದಾಗಿ ಬೃಹತ್ ಮರ ಉರುಳಿ ತುಂಡಾಗಿ ಆಟೋ ಮೇಲೆ ಬಿದ್ದಿದೆ. ಪರಿಣಾಮ ಆಟೋ ಚಾಲಕ ಮಹೇಶ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅದೃಷ್ಟವಶಾತ್, ಆ ಸಂದರ್ಭದಲ್ಲಿ ಆಟೋದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.ಸಿಕೆ ಅಚ್ಚುಕಟ್ಟು ಬಳಿಯ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಇಟ್ಟಮಡು ಮೂಲದ ಆಟೋ ಚಾಲಕ ಮಹೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಂಜೆ 7:30ರ ಸುಮಾರಿಗೆ ಈ ಘಟನೆ ನಡೆದಿದೆ. ವಿಚಾರ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.
