Home ಬೆಂಗಳೂರು ನಗರ Moral policing in Bengaluru: ನೈತಿಕ ಪೊಲೀಸ್‌ಗಿರಿಯನ್ನು ಧೈರ್ಯದಿಂದ ಎದುರಿಸಿದ ಬುರ್ಖಾಧಾರಿ ಯುವತಿಗೆ ಮೆಚ್ಚುಗೆ; ಆರೋಪಿ...

Moral policing in Bengaluru: ನೈತಿಕ ಪೊಲೀಸ್‌ಗಿರಿಯನ್ನು ಧೈರ್ಯದಿಂದ ಎದುರಿಸಿದ ಬುರ್ಖಾಧಾರಿ ಯುವತಿಗೆ ಮೆಚ್ಚುಗೆ; ಆರೋಪಿ ಬಂಧನ

40
0
Bengaluru: Kudos to the burqa-wearing young woman who bravely faced moral policing; Accused arrested
Bengaluru: Kudos to the burqa-wearing young woman who bravely faced moral policing; Accused arrested

ಬೆಂಗಳೂರು:

ಬೆಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿಯನ್ನು ಧೈರ್ಯವಾಗಿ ಎದುರಿಸಿ ಆರೋಪಿಗೆ ಸವಾಲೆಸೆದ ಬುರ್ಖಾಧಾರಿ ಯುವತಿಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಬುರ್ಖಾ ತೊಟ್ಟಿದ್ದ ಯುವತಿ ಹಿಂದೂ ಯುವಕನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಯುವಕನೊಬ್ಬ ಅಡ್ಡಿಪಡಿಸಿದ ಘಟನೆ ಬೆಂಗಳೂರಿನಲ್ಲಿ ಶನಿವಾರ ನಡೆದಿದೆ. ಯುವಕ ಗಲಾಟೆ ಮಾಡಿದ್ದಾನೆ. ಯುವತಿಯನ್ನು ನಿಂದಿಸಿದ್ದಾನೆ ಮತ್ತು ಬುರ್ಖಾ ತೆಗೆಯುವಂತೆಯೂ ಒತ್ತಾಯಿಸಿದ್ದಾನೆ.

ಈ ಸಂಬಂಧ ಜಾಕಿರ್ ಅಹಮದ್ ಎಂಬ ಯುವಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಮಹಿಳೆ ಆರೋಪಿಗೆ ಸವಾಲೆಸೆದಿದ್ದಾಳೆ.

‘ನನ್ನನ್ನು ಪ್ರಶ್ನಿಸಲು ನೀವು ಯಾರು?’ ಎಂದು ಯುವತಿ ಯುವಕನನ್ನು ಕೇಳಿದ್ದಾಳೆ.

WhatsApp Image 2023 08 28 at 5.49.37 PM

ನೀವು ನಮ್ಮ ಧರ್ಮಕ್ಕೆ ಕಳಂಕ ತರುತ್ತಿರುವಿರಿ ಎಂದು ಮೂಲಕ ಯುವಕ ಆಕೆಗೆ ತೊಂದರೆ ನೀಡಲು ಪ್ರಾರಂಭಿಸಿದಾಗ, ಕೋಪಗೊಂಡ ಯುವತಿ, ‘ಬೋಲ್ನೆ ವಾಲಾ ತುಮ್ ಕೌನ್ (ಇದನ್ನು ಪ್ರಶ್ನಿಸಲು ನೀವು ಯಾರು?) ಎನ್ನುತ್ತಾಳೆ.

ಈ ವೇಳೆ ಆರೋಪಿಯು ಆಕೆಯನ್ನು ಹಿಂದೂ ಯುವಕನ ಜೊತೆ ಏಕೆ ಹೋಗುತ್ತಿರುವೆ ಎಂದು ಪ್ರಶ್ನಿಸುತ್ತಾನೆ. ಆಗ ಯುವತಿಯು, ‘ಹಮಾರಿ ಮರ್ಜಿ (ಇದು ನನ್ನ ಆಯ್ಕೆ)’ ಎಂದು ಉತ್ತರಿಸುತ್ತಾಳೆ.

ಈ ವೇಳೆ ಸುತ್ತಲೂ ಗುಂಪುಗೂಡಿದ ಜನರು, ಆಕೆಯು ಅಲ್ಲಿಂದ ಹೊರಡುವಂತೆ ಒತ್ತಾಯಿಸುತ್ತಾರೆ. ಆದರೆ, ಇದ್ಯಾವುದಕ್ಕೂ ಜಗ್ಗದ ಆಕೆ ಆರೋಪಿಯೊಂದಿಗೆ ಜಗಳವಾಡುತ್ತಲೇ ಇರುತ್ತಾಳೆ.

ಆರೋಪಿ ಯುವಕ, ಯುವತಿಯ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿದ್ದು, ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾನೆ.

ಈ ವೈರಲ್ ವಿಡಿಯೋವನ್ನು ಬೆಂಗಳೂರು ಪೊಲೀಸರ ಖಾತೆಗೆ ಟ್ಯಾಗ್ ಮಾಡಿದ ನಂತರ ಈಸ್ಟ್ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ (ಸಿಇಎನ್) ಪೊಲೀಸ್ ಠಾಣೆಯು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂತಹ ಘಟನೆಗಳ ಬಗ್ಗೆ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ನಿವಾಸಿಯಾದ ಜಾಕೀರ್ ಅಹಮದ್‌ನನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪೊಲೀಸರು ಆತನ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಸೆಕ್ಷನ್ 66 ಮತ್ತು 66 (ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 21 ವರ್ಷದ ಸಂತ್ರಸ್ತೆ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು.

ಆರೋಪಿ ಯುವಕ ರಷ್ಯಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಎರಡು ತಿಂಗಳ ರಜೆ ಮೇರೆಗೆ ಸಹೋದರಿಯರ ಮನೆಗೆ ಬಂದಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಇದೀಗ ಯುವತಿಯ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here