ಬೆಂಗಳೂರು: ನಗರದ ಎಂಜಿ ರಸ್ತೆಯ ಅನಿಲ್ ಕುಂಬಳೆ ಸರ್ಕಲ್ ಬಳಿ ನಸುಕಿನ ಜಾವ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಮಾಡುವ ಘಟನೆ ಸಂಚಲನ ಸೃಷ್ಟಿಸಿದೆ. ರಾತ್ರಿ 2 ರಿಂದ 3 ಗಂಟೆಯ ನಡುವಿನ ವೇಳೆಯಲ್ಲಿ ನಡೆದ ಈ ಘಟನೆ, ಚಾಲಕನ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಚಾಲಕ ರಸ್ತೆ ಮಧ್ಯೆ ಕಾರನ್ನು ಗಿರಗಿರ ತಿರುಗಿಸುತ್ತಾ ಸ್ಟಂಟ್ ಪ್ರದರ್ಶಿಸುತ್ತಿದ್ದಾಗ, ಸ್ಥಳೀಯರು ಈ ದೃಶ್ಯಗಳನ್ನು ತಮ್ಮ ಮೊಬೈಲ್ನಲ್ಲಿ ದಾಖಲಿಸಿ ಪೊಲೀಸರಿಗೆ ಒದಗಿಸಿದ್ದಾರೆ.
KA05 NR0009 ಸಂಖ್ಯೆಯ ಕಾರು ಎಂದು ಗುರುತಿಸಲ್ಪಟ್ಟಿದ್ದು, ಅದರ ದಾಖಲೆಗಳು ಆರ್ಟಿಒನಲ್ಲಿ ಲಭ್ಯವಿಲ್ಲವೆಂಬ ಅನುಮಾನ ವ್ಯಕ್ತವಾಗಿದೆ. ಇದರಿಂದ, ರಿಜಿಸ್ಟ್ರೇಶನ್ ಇಲ್ಲದೇ ವಾಹನ ಚಲಾಯಿಸುತ್ತಿದ್ದಾನೆ ಎಂಬ ಶಂಕೆಯೂ ಮೂಡಿದೆ. ಈ ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ನಗರದಲ್ಲಿ ಇಂತಹ ಸ್ಟಂಟ್ಗಳಿಗೆ ಅನುಮತಿ ಇಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇಂತಹ ಕೃತ್ಯಗಳಲ್ಲಿ ತೊಡಗಿದರೆ, ವಾಹನವನ್ನು ವಶಪಡಿಸಿಕೊಂಡು ಆರ್ಸಿ ರದ್ದುಗೊಳಿಸುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
