ಇಂದಿನಿಂದ ಡಿಜಿಟಲ್ ಜನಗಣತಿ–2027 ಆರಂಭ: ಏಪ್ರಿಲ್ 15ರೊಳಗೆ ‘ಸ್ವಯಂ ಗಣತಿ’ ಪೂರ್ಣಗೊಳಿಸಲು ನಾಗರಿಕರಿಗೆ ಮನವಿ
ಬೆಂಗಳೂರು: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ನಡೆಯುತ್ತಿರುವ ಜನಗಣತಿ–2027ರ ಮೊದಲ ಹಂತವು ಇಂದಿನಿಂದ ಆರಂಭವಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ ದಕ್ಷಿಣ, ಉತ್ತರ, ಕೇಂದ್ರ ಮತ್ತು ಪೂರ್ವ ನಗರ ಪಾಲಿಕೆಗಳೆಲ್ಲಾ ಈ ಮಹತ್ವದ ಕಾರ್ಯಕ್ಕೆ ಸಜ್ಜಾಗಿದ್ದು, ನಾಗರಿಕರು ‘ಸ್ವಯಂ ಗಣತಿ’ (Self-Enumeration) ಮೂಲಕ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ 15 ದಿನಗಳ ಕಾಲ ಸ್ವಯಂ ಗಣತಿ ಅವಕಾಶ ನೀಡಲಾಗಿದ್ದು, ನಾಗರಿಕರು https://se.census.gov.in ವೆಬ್ ಪೋರ್ಟಲ್ ಮೂಲಕ ತಮ್ಮ ಮನೆ ಹಾಗೂ ಕುಟುಂಬದ ವಿವರಗಳನ್ನು ಆನ್ಲೈನ್ನಲ್ಲಿ ದಾಖಲಿಸಬಹುದು. ಮೊಬೈಲ್, ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಮೂಲಕ ಕೇವಲ 15–20 ನಿಮಿಷಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.
ಸ್ವಯಂ ಗಣತಿ ಪೂರ್ಣಗೊಂಡ ಬಳಿಕ, ನಾಗರಿಕರಿಗೆ ವಿಶಿಷ್ಟ ಸ್ವಯಂ ಗಣತಿ ಐಡಿ (Self-Enumeration ID) ನೀಡಲಾಗುತ್ತದೆ. ಈ ಐಡಿಯನ್ನು ನಂತರ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಹಂಚಿಕೊಳ್ಳಬೇಕಾಗುತ್ತದೆ.
ಜನಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಮೊದಲ ಹಂತದಲ್ಲಿ ಸ್ವಯಂ ಗಣತಿ ನಡೆಯಲಿದೆ. ಬಳಿಕ ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಗಣ್ಯ ವ್ಯಕ್ತಿಗಳ ಸ್ವಯಂ ಗಣತಿಯ ಮೂಲಕ ಈ ಡಿಜಿಟಲ್ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವುದರ ಜೊತೆಗೆ ಜನಗಣತಿ ಪ್ರಕ್ರಿಯೆ ಬಗ್ಗೆ ಅರಿವು ಹೆಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ, ಕೇಂದ್ರ ಹಾಗೂ ಪೂರ್ವ ನಗರ ಪಾಲಿಕೆಗಳಲ್ಲೂ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು, ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಜನಗಣತಿಯಿಂದ ಸಂಗ್ರಹವಾಗುವ ಮಾಹಿತಿಯು ಮುಂದಿನ ದಿನಗಳಲ್ಲಿ ನಗರ ಯೋಜನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳ ರೂಪುರೇಷೆಗಳಿಗೆ ಆಧಾರವಾಗಲಿದೆ.
ನಾಗರಿಕರು ಸಲ್ಲಿಸುವ ಎಲ್ಲಾ ಮಾಹಿತಿಯನ್ನು ಸಂಪೂರ್ಣ ಗೌಪ್ಯತೆಯೊಂದಿಗೆ ಸಂರಕ್ಷಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
“ಡಿಜಿಟಲ್ ಜನಗಣತಿ ಕೇವಲ ಅಂಕಿಅಂಶ ಸಂಗ್ರಹವಲ್ಲ, ಇದು ನಗರದ ಭವಿಷ್ಯದ ಅಭಿವೃದ್ಧಿಗೆ ಬುನಾದಿ. ಪ್ರತಿಯೊಬ್ಬ ನಾಗರಿಕರೂ ಸ್ವಯಂ ಗಣತಿ ಸೌಲಭ್ಯವನ್ನು ಬಳಸಿಕೊಂಡು ಈ ರಾಷ್ಟ್ರೀಯ ಕಾರ್ಯದಲ್ಲಿ ಭಾಗವಹಿಸಬೇಕು,” ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
