ಬೆಂಗಳೂರು:
ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಡ್ರಮ್ ನಲ್ಲಿ ಇರಿಸಲಾಗಿದ್ದ ಮಹಿಳೆಯ ಮೃತದೇಹ ಪತ್ತೆ ಪ್ರಕರಣವನ್ನು ಬೇಧಿಸುವಲ್ಲಿ ರಾಜ್ಯ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಇತರ ಐವರ ಹುಡುಕಾಟ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬಂಧಿತರನ್ನು ಕಮಾಲ್, ತನ್ವೀರ್ ಮತ್ತು ಶಕೀಬ್ ಎಂದು ಗುರುತಿಸಲಾಗಿದೆ. ನವಾಬ್, ಜಮಾಲ್, ಮಜರ್, ಅಸ್ಸಾಬ್ ಮತ್ತು ಸಬೂಲ್‌ಗಾಗಿ ಹುಡುಕಾಟ ನಡೆಯುತ್ತಿದೆ. ಆರೋಪಿಗಳೆಲ್ಲರೂ ಬಿಹಾರ ಮೂಲದವರಾಗಿದ್ದು, ಕಲಾಸಿಪಾಳ್ಯದ ತರಕಾರಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇದೇ ತಿಂಗಳ 12 ರಂದು ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಬಳಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಕೊಲೆಯ ಹಿಂದೆ ಸರಣಿ ಹಂತಕರ ಕೈವಾಡದ ಬಗ್ಗೆ ಶಂಕಿಸಿದ್ದರು.
#RPF Vijayawada along with GRP acted with alacrity & caught 05 perpetrators in the murder case of a woman whose body was found dumped in a drum at SMVT Bengaluru railway station.
— RPF INDIA (@RPF_INDIA) March 15, 2023
We will not rest until justice is served for the victim of this heinous crime.#OperationRailPrahari pic.twitter.com/zlG4BXYNoo
ಮೃತ ಮಹಿಳೆಯನ್ನು ತಮನ್ನಾ ಎಂದು ಗುರುತಿಸಲಾಗಿದೆ. ಪ್ಲಾಸ್ಟಿಕ್ ಡ್ರಮ್‌ನಲ್ಲಿ ಪತ್ತೆಯಾದ ಸ್ಟಿಕ್ಕರ್‌ನಿಂದ ಪೊಲೀಸ್ ತಂಡಕ್ಕೆ ಮಹತ್ವದ ಸುಳಿವು ಸಿಕ್ಕಿದೆ. ಅಲ್ಲದೆ, ಹಂತಕರು ಆಟೋದಲ್ಲಿ ಬಂದು ಮೃತದೇಹವಿದ್ದ ಡ್ರಮ್ ನ್ನು ರೈಲ್ವೇ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಎಸೆದು ಹೋಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಕೆಯನ್ನು ಹತ್ಯೆಗೈದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ತಮನ್ನಾ ತನ್ನ ವಿಶೇಷ ಚೇತನ ಪತಿ ಅಫ್ರೋಜ್ ಗೆ ವಿಚ್ಚೇದನ ನೀಡಿ, ಆತನ ಸೋದರ ಸಂಬಂಧಿ ಇಂತಿಕಾಬ್ ಜೊತೆಗೆ ವಿವಾಹವಾಗಿದ್ದರು. ಇದನ್ನು ಲಘುವಾಗಿ ಪರಿಗಣಿಸದ ಅಪ್ರೋಜ್ ಕುಟುಂಬ, ತಮನ್ನಾ ವಿರುದ್ಧ ದ್ವೇಷವನ್ನು ಬೆಳೆಸಿಕೊಂಡಿತ್ತು. ಆರೋಪಿಗಳು ಮಾರ್ಚ್ 12 ರಂದು ತಮನ್ನಾ ಅವರನ್ನು ಊಟಕ್ಕೆ ಆಹ್ವಾನಿಸಿದ್ದು, ವೇಲ್ ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಬಳಿಕ ತಡರಾತ್ರಿ ಪ್ಲಾಸ್ಟಿಕ್ ಡ್ರಮ್ ನಲ್ಲಿ ಶವ ಇಟ್ಟು ಪರಾರಿಯಾಗಿದ್ದರು. ಡ್ರಮ್‌ನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಡಿಸೆಂಬರ್ 2022 ರಿಂದ ಇಂತಹ ಮೂರನೇ ಘಟನೆ ವರದಿ ಕುರಿತು ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 2022 ರ ಎರಡನೇ ವಾರದಲ್ಲಿ, ಬಂಗಾರಪೇಟೆ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವಿನ ವಿಶೇಷ ಮೆಮೊ ರೈಲಿನಲ್ಲಿ ಹಳದಿ ಗೋಣಿಚೀಲದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಯಶವಂತಪುರ ರೈಲು ನಿಲ್ದಾಣದ ಪ್ಲಾಟ್ ಫಾರಂ ನಂಬರ್ 1 ರಲ್ಲಿ 20 ವರ್ಷದ ಯುವತಿಯ ಮೃತದೇಹವನ್ನು ಡ್ರಮ್‌ನಲ್ಲಿ ಎಸೆಯಲಾಗಿತ್ತು.