ಬೆಂಗಳೂರು: 2025ಕ್ಕೆ ವಿದಾಯ ಹೇಳಿ 2026ನ್ನು ಸ್ವಾಗತಿಸಲು ನಗರ ಸಜ್ಜಾಗಿರುವ ಹಿನ್ನೆಲೆ, ಬೆಂಗಳೂರು ನಗರ ಪೊಲೀಸ್ ಇಲಾಖೆ ಸಂಪೂರ್ಣ ಹೈ ಅಲರ್ಟ್ ಘೋಷಿಸಿದ್ದು, ಹೊಸ ವರ್ಷದ ಸಂಭ್ರಮ ಯಾವುದೇ ಅಹಿತಕರ ಘಟನೆಗಳಿಲ್ಲದೆ ನಡೆಯುವಂತೆ ಕಠಿಣ ಭದ್ರತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡುವ ಯಾವುದೇ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ಪೊಲೀಸ್ ಇಲಾಖೆ ಕಡಕ್ ಎಚ್ಚರಿಕೆ ನೀಡಿದ್ದು, ಅಶಾಂತಿ ಸೃಷ್ಟಿಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
“ಜನರು ಜವಾಬ್ದಾರಿಯುತವಾಗಿ ಸಂಭ್ರಮಿಸಲಿ. ಆದರೆ ತೊಂದರೆ ಮಾಡುವವರನ್ನು ಬಿಡುವುದಿಲ್ಲ. ಸಿಸಿಟಿವಿ, ವ್ಯಾಪಕ ಪೊಲೀಸ್ ನಿಯೋಜನೆ ಇರುವುದರಿಂದ ಸಣ್ಣ ಜಗಳಕ್ಕೂ ಕಠಿಣ ಕ್ರಮ ಖಚಿತ,” ಎಂದು ಹಿರಿಯ ಪೊಲೀಸ್ ಅಧಿಕಾರಿ ಎಚ್ಚರಿಸಿದರು.
ಪಾರ್ಟಿ, ಡಿಜೆ, ಮದ್ಯಪಾನಕ್ಕೆ ನಿಯಂತ್ರಣ
ಹೋಟೆಲ್, ಪಬ್, ಕ್ಲಬ್, ರೆಸಾರ್ಟ್ಗಳಲ್ಲಿ ಸಂಭ್ರಮಾಚರಣೆಗೆ ಸಮಯ ಮಿತಿ ಹೇರಲಾಗಿದ್ದು, ಡಿಜೆ ಹಾಗೂ ಲೌಡ್ಸ್ಪೀಕರ್ ಬಳಕೆಗೆ ನಿಗದಿತ ನಿಯಮಗಳು ಜಾರಿಗೊಳಿಸಲಾಗಿದೆ.
ಮದ್ಯಪಾನ ಮಾಡಿ ವಾಹನ ಚಾಲನೆ, ಅಕ್ರಮ ಪಾರ್ಟಿ, ಗಲಾಟೆ, ಗುಂಡಾಗಿರಿ, ಅಪಾಯಕಾರಿ ಸ್ಟಂಟ್ಗಳಿಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ.
ಭಾರೀ ಭದ್ರತಾ ವ್ಯವಸ್ಥೆ
ಮಹಿಳಾ ಸುರಕ್ಷತೆಗೆ ವಿಶೇಷ ಒತ್ತು ನೀಡಿ:
- ಒಟ್ಟು 20,000 ಪೊಲೀಸ್ ಸಿಬ್ಬಂದಿ ನಿಯೋಜನೆ
- 4,000 ಕಂಟ್ರೋಲ್ ರೂಮ್ ಸಿಬ್ಬಂದಿ
- 78 ವಾಚ್ ಟವರ್ಗಳ ಸ್ಥಾಪನೆ
- ಸಿಸಿಟಿವಿ, ಡ್ರೋನ್ ಹಾಗೂ ತಾಂತ್ರಿಕ ಸಾಧನಗಳ ಮೂಲಕ ನಿಗಾವಹಣೆ
- ಹೆಚ್ಚುವರಿ ಮಹಿಳಾ ಪೊಲೀಸ್ ಪೆಟ್ರೋಲಿಂಗ್

ಎಂಜಿ ರೋಡ್ ಮೆಟ್ರೋ 10 ನಂತರ ಬಂದ್
ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಸೂಚನೆಯಂತೆ, ಡಿಸೆಂಬರ್ 31ರಂದು ರಾತ್ರಿ 10 ಗಂಟೆಯಿಂದ ಎಂಜಿ ರೋಡ್ ಮೆಟ್ರೋ ನಿಲ್ದಾಣವನ್ನು ಪ್ರವೇಶ–ನಿರ್ಗಮನಕ್ಕೆ ಬಂದ್ ಮಾಡಲಾಗುತ್ತದೆ.
“10 ಗಂಟೆಯ ಬಳಿಕ ರೈಲುಗಳು ಎಂಜಿ ರೋಡ್ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಪ್ರಯಾಣಿಕರು ಟ್ರಿನಿಟಿ ಹಾಗೂ ಕಬನ್ ಪಾರ್ಕ್ ನಿಲ್ದಾಣಗಳಲ್ಲಿ ಏರು–ಇಳಿಯಬೇಕು,” ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯರಾತ್ರಿ ನಂತರ ಸಾರಿಗೆ ವ್ಯವಸ್ಥೆ
ಮಧ್ಯರಾತ್ರಿ 12 ಗಂಟೆಯ ನಂತರ ಜನರಿಗೆ ತೊಂದರೆ ಆಗದಂತೆ ಬಿಎಂಟಿಸಿ ಹೆಚ್ಚುವರಿ ಬಸ್ಗಳನ್ನು ಚಾಲನೆ ಮಾಡಲಿದೆ.
ಹಾಗೆಯೇ ಒಲಾ, ಉಬರ್, ರಾಪಿಡೋ ಸಂಸ್ಥೆಗಳ ಸಹಕಾರದೊಂದಿಗೆ ಹೆಚ್ಚುವರಿ ಕ್ಯಾಬ್ ಹಾಗೂ ಆಟೋ ವ್ಯವಸ್ಥೆಗೂ ಪೊಲೀಸ್ ಇಲಾಖೆ ಮುಂದಾಗಿದೆ.
ಸಿಎಂ ಭದ್ರತಾ ಪರಿಶೀಲನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಹಿಳಾ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ, ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಒಟ್ಟಿನಲ್ಲಿ, ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಪ್ರತಿಯೊಂದು ಮೂಲೆಯಲ್ಲೂ ಹೊಸ ವರ್ಷದ ಸಂಭ್ರಮಕ್ಕೆ ಪೊಲೀಸ್ ಇಲಾಖೆ ಸಜ್ಜಾಗಿದೆ.
ಪಾರ್ಟಿ ಹೆಸರಿನಲ್ಲಿ ಗಲಾಟೆ ಮಾಡುವವರಿಗೆ ಕಾನೂನು ಬಿಸಿ ತಾಗುವುದು ಖಚಿತ ಎಂದು ಪೊಲೀಸರು ಎಚ್ಚರಿಸಿದ್ದಾರೆ.
