ಬೆಂಗಳೂರು: ಬೆಂಗಳೂರು ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ನಾಗರಿಕರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಒಟ್ಟು 200 ವಿದೇಶಿ ನಾಗರಿಕರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಕಳೆದ ಕೆಲವು ದಿನಗಳಿಂದ ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಗರ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಲು ವಿವಿಧ ಪೊಲೀಸ್ ಘಟಕಗಳು ವಿಶೇಷ ಕಾರ್ಯಾಚರಣೆ ನಡೆಸುತ್ತಿವೆ.

ಈ ಕಾರ್ಯಾಚರಣೆಯ ಭಾಗವಾಗಿ ಮಾರ್ಚ್ 6ರ ಮುಂಜಾನೆ ವೇಳೆ ಕೇಂದ್ರ ಅಪರಾಧ ವಿಭಾಗ (CCB) ಅಧಿಕಾರಿಗಳು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಕಡುಗೋಡಿ ಹಾಗೂ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದರು. ಈ ವೇಳೆ ಅಲ್ಲಿ ಶೆಡ್ಗಳನ್ನು ನಿರ್ಮಿಸಿಕೊಂಡು ಅಕ್ರಮವಾಗಿ ವಾಸಿಸುತ್ತಿದ್ದ 124 ಬಾಂಗ್ಲಾದೇಶಿ ನಾಗರಿಕರನ್ನು ವಶಕ್ಕೆ ಪಡೆಯಲಾಯಿತು.
ಬಂಧಿತರಲ್ಲಿ 48 ಪುರುಷರು, 42 ಮಹಿಳೆಯರು ಹಾಗೂ 34 ಮಕ್ಕಳು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ವಿದೇಶಿ ನಾಗರಿಕರ ನೋಂದಣಿ ಕಚೇರಿ (FRRO)ಗೆ ವರದಿ ಸಲ್ಲಿಸಲಾಗಿದೆ. ಅಗತ್ಯ ಕ್ರಮದ ಭಾಗವಾಗಿ ಅವರನ್ನು ತಮ್ಮ ದೇಶಕ್ಕೆ ಹಿಂತಿರುಗಿಸುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ.
ಈ ವಿಶೇಷ ಕಾರ್ಯಾಚರಣೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಕಾರ ನೀಡಿವೆ. ಬೆಂಗಳೂರು ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ನಾಗರಿಕರನ್ನು ಗುರುತಿಸಿ ಕ್ರಮ ಕೈಗೊಳ್ಳುವ ಕಾರ್ಯ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
