ಬೆಂಗಳೂರು: ದಿಢೀರ್ ಸುರಿದ ಬೆಂಗಳೂರು ಮಳೆ ನಗರದಲ್ಲಿ ಹಾನಿ ಉಂಟುಮಾಡಿದೆ. ಮಂಗಳವಾರ ರಾತ್ರಿ ಆರಂಭವಾದ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರದಿಂದ ಹಲವೆಡೆ ಮರಗಳು ಧರೆಗುರುಳಿದ್ದು, ರಸ್ತೆ ಜಲಾವೃತಗೊಂಡಿವೆ. ಹಲವು ವಾಹನಗಳು ಜಖಂಗೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ರಾಜಾಜಿನಗರ 4ನೇ ಬ್ಲಾಕ್ ಪ್ರದೇಶದಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೃಹತ್ ಮರ ಧರೆಗುರುಳಿದ್ದು, ಐದು ಕಾರುಗಳು, ಒಂದು ಟಾಟಾ ಏಸ್ ಗೂಡ್ಸ್ ವಾಹನ ಹಾಗೂ ನಾಲ್ಕು ಬೈಕ್‌ಗಳು ಹಾನಿಗೊಂಡಿವೆ. ಮನೆಯ ಕಾಂಪೌಂಡ್ ಮೇಲೆಯೂ ಮರ ಉರುಳಿದ್ದರಿಂದ ನಿವಾಸಿಗಳು ಒಳಗೆ ಸಿಲುಕಿಕೊಂಡರು. ನಿವಾಸಿಗಳ ಪ್ರಕಾರ, ಭಾರೀ ಶಬ್ದದೊಂದಿಗೆ ಮರ ಬಿದ್ದು ಗೇಟ್ ಸಂಪೂರ್ಣ ಬಂದಾಗಿತ್ತು.

ಚಾಮರಾಜಪೇಟೆ ಮಕ್ಕಳ ಕೂಟ ರಸ್ತೆಯಲ್ಲಿ ಮತ್ತೊಂದು ಬೃಹತ್ ಮರ ಬುಡ ಸಮೇತ ಉರುಳಿದ್ದು, ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಬಸ್ ಶೆಲ್ಟರ್‌ಗೂ ಹಾನಿಯಾದ ಪರಿಣಾಮ ಸ್ಥಳೀಯರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು.
ಇದಲ್ಲದೆ, ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಸಿಗ್ನಲ್ ಬಳಿ ಜಲಾವೃತವಾಗಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಒಂದು ಆಂಬ್ಯುಲೆನ್ಸ್ ಸಹ ನೀರಿನಲ್ಲಿ ಸಿಲುಕಿಕೊಂಡ ಘಟನೆ ಆತಂಕ ಮೂಡಿಸಿತು.

ನಗರದ ಹಲವೆಡೆ ಹಳೆಯ ಮರಗಳನ್ನು ತೆರವುಗೊಳಿಸುವಲ್ಲಿ ಬಿಬಿಎಂಪಿ ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷ್ಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತೀ ಮಳೆಗಾಲದಲ್ಲೂ ಇದೇ ರೀತಿಯ ಅವಾಂತರ ಮರುಕಳಿಸುತ್ತಿರುವುದರಿಂದ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
Also Read: Bengaluru Rains Cause Havoc: Trees Uprooted, Roads Flooded, Vehicles Damaged in Overnight Downpour
ಹವಾಮಾನ ಇಲಾಖೆ ಇನ್ನೂ ಕೆಲ ದಿನಗಳ ಕಾಲ ಬೆಂಗಳೂರು ಮಳೆಯ ಮುನ್ಸೂಚನೆ ನೀಡಿದ್ದು, ನಾಗರಿಕರು ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಲಾಗಿದೆ.