ಸಾಧನಾ ಸಮಾವೇಶ ಮಾಡಿದ್ದು ಸಾಕು. ನಿಮ್ಮ ಗ್ಯಾರಂಟಿ ನಾಟಕವೂ ಸಾಕು ಎಂದು ಕೇಂದ್ರ ಸಚಿವರ ಕಿಡಿ
ನವ ದೆಹಲಿ: ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಭಾರೀ ಅನಾಹುತ ಉಂಟಾಗಿದ್ದು, ಪರಿಹಾರ ಕಾರ್ಯಗಳಿಗೆ ಖುದ್ದು ಸಚಿವರನ್ನೇ ನಿಯೋಜಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಸಾಧನಾ ಸಮಾವೇಶ ಮಾಡಿದ್ದು ಸಾಕು. ನಿಮ್ಮ ಗ್ಯಾರಂಟಿ ನಾಟಕವೂ ಸಾಕು. ಮೊದಲು ಬೆಂಗಳೂರು ಸೇರಿ ರಾಜ್ಯದ ಉದ್ದಗಲಕ್ಕೂ ಆಗಿರುವ ಮಳೆ ಅನಾಹುತದ ಕಡೆ ಗಮನ ಹರಿಸಿ ಎಂದು ಹೇಳಿದ್ದಾರೆ.
ಇಡೀ ರಾಷ್ಟ್ರಕ್ಕೆ ಮಾದರಿ ನಗರ ಆಗಿದ್ದ ಬೆಂಗಳೂರು ದುಸ್ಥಿತಿಯನ್ನು ಸರಿಪಡಿಸಿ. ಕಷ್ಟದಲ್ಲಿರುವ ಜನರಿಗೆ ಸ್ಪಂದಿಸಿ. ರಾಜ್ಯಾದ್ಯಂತ ಮಳೆಹಾನಿ ಪ್ರದೇಶಗಳಿಗೆ ಸಚಿವರನ್ನು ನಿಯೋಜನೆ ಮಾಡಿ ತಕ್ಷಣವೇ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳಿ ಎಂದು ಅವರು ಸಲಹೆ ಮಾಡಿದ್ದಾರೆ.