ಬೆಂಗಳೂರು: ಕೇರಳದ ವಯನಾಡಿನಲ್ಲಿ ಮಹಾಮಳೆಗೆ ಸಂಭವಿಸಿರುವ ಭೂಕುಸಿತದಿಂದ ನೂರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಲ್ಲಿ ಬೊಬ್ಬಿರಿಸಿದ ಮಳೆ ಹಾಗಾಗಿ ಬೆಂಗಳೂರಿನ ಜನತೆಗೆ ಭಾರತೀಯ ಹವಾಮಾನ ಇಲಾಖೆ ಭಾರೀ ಮಳೆಯ ಅಲರ್ಟ್ ನೀಡಿದೆ.
ಬೆಳಗಿನಿಂದಲೂ ಮೋಡ ಕವಿದ ವಾತಾವರಣ ವಿತ್ತು. ಅದರಂತೆ ಸಂಜೆ ಆಗುತ್ತಿದ್ದಂತೆ ನಗರದಲ್ಲಿ ವರುಣನ ಎಂಟ್ರಿಯಾಗಿದ್ದು ಧಾರಾಕಾರವಾಗಿ ಸುರಿಯುತ್ತಿದೆ. ಇದರಿಂದ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಜನರು ಪರದಾಟ ನಡೆಸುತ್ತಿದ್ದಾರೆ. ಬೈಕ್ ಸವಾರರು ಮಳೆಯಲ್ಲಿ ಸಿಕ್ಕು ತೊಂದರೆ ಅನುಭವಿಸಿದ್ದಾರೆ.
ಜುಲೈ ತಿಂಗಳು ಅಂತ್ಯವಾಯ್ತು. ಇದೀಗ ಆಗಸ್ಟ್ ತಿಂಗಳಲ್ಲೂ ಧಾರಾಕಾರ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಕೊಡಗು ಸೇರಿದಂತೆ ಕರ್ನಾಟಕದ ಹಲವು ಭಾಗದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ.
ಕೇರಳದ ವಯನಾಡಿನಲ್ಲಿ ಸುರಿದ ಭಾರಿ ಮಳೆ ನಂತರ ನಿನ್ನೆ ಮಾತ್ರ ಸಿಲಿಕಾನ್ ಸಿಟಿಯಲ್ಲಿ ಹಲವೆಡೆ ಧಾರಾಕಾರ ಮಳೆ ಆಗಿದೆ. ಕಾರ್ಪೊರೇಷನ್, ಶಾಂತಿನಗರ, ವಿಲ್ಸನ್ ಗಾರ್ಡನ್, ಲಾಲ್ಬಾಗ್, ಬಸವನಗುಡಿ, ಕಬ್ಬನ್ಪಾರ್ಕ್, ವಿ.ವಿ.ಪುರಂ, ಬನಶಂಕರಿ, ಚಾಮರಾಜಪೇಟೆ ಸುತ್ತಮುತ್ತ ಸೇರಿದಂತೆ ಹಲವೆಡೆ ಮಳೆ ಆರ್ಭಟಿಸಿದೆ. ಜೋರು ಮಳೆ ಹಿನ್ನೆಲೆ ವಾಹನಗಳ ಸವಾರರು ಹೈರಾಣಾಗಿದ್ದಾರೆ.
ಕರ್ನಾಟಕದಲ್ಲಿ ಮತ್ತೆ ವರುಣನ ಅಬ್ಬರ ಹೆಚ್ಚಾಗಲಿದ್ದು, 5 ಜಿಲ್ಲೆಗಳಿಗೆ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ.ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.ಹಾಸನ, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್, ಬೆಳಗಾವಿ, ಮೈಸೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಿಜಯನಗರ, ತುಮಕೂರು, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬಾಗಲಕೋಟೆಯಲ್ಲೂ ಮಳೆಯಾಗಲಿದೆ.