ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ರೋಡ್ ರೇಜ್ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚಿನ ಘಟನೆ ಬಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಗ್ಗದಾಸಪುರ ಮುಖ್ಯ ರಸ್ತೆಯಲ್ಲಿ ನಡೆದಿದ್ದು, ಜೆಪ್ಟೋ ಡೆಲಿವರಿ ಬಾಯ್ ಮೇಲೆ ಇಬ್ಬರು ದ್ವಿಚಕ್ರ ವಾಹನ ಸವಾರರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ.
ಘಟನೆ 29ನೇ ಅಡ್ಡ ರಸ್ತೆಯ ಸಮೀಪ ನಡೆದಿದೆ. ಡೆಲಿವರಿ ಎಕ್ಸಿಕ್ಯೂಟಿವ್ ಎಲೆಕ್ಟ್ರಿಕ್ ಟೂ-ವೀಲರ್ನಲ್ಲಿ ಸಾಗುತ್ತಿದ್ದಾಗ, ಅಡ್ಡ ಬಂದೆ ಎಂಬ ಕಾರಣಕ್ಕೆ ಬೈಕ್ ಸವಾರರು ವಾಗ್ವಾದಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಮಾತಿನ ಚಕಮಕಿ ಕ್ಷಣಾರ್ಧದಲ್ಲೇ ಹಿಂಸಾಚಾರಕ್ಕೆ ತಿರುಗಿ, ಡೆಲಿವರಿ ಬಾಯ್ ವಾಹನಕ್ಕೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾರೆ.
ಕೆಳಗೆ ಬಿದ್ದ ಬಳಿಕವೂ ಕಾಲಿನಿಂದ ಒದ್ದಾಡಿ, ಮುಷ್ಟಿಯಿಂದ ಹೊಡೆದು ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ. ಈ ವೇಳೆ ಕಣ್ಣಿನ ಭಾಗಕ್ಕೆ ರಕ್ತಗಾಯವಾಗಿದೆ. ಸುತ್ತಮುತ್ತಲಿನ ಸ್ಥಳೀಯರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಹಲ್ಲೆಯ ದೃಶ್ಯಗಳು CCTV ಹಾಗೂ ಸ್ಥಳೀಯರ ಮೊಬೈಲ್ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಸುಮಾರು ಒಂದೂವರೆ ರಿಂದ ಎರಡು ನಿಮಿಷಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಕರಣ ಸಂಬಂಧ ಬಯಪ್ಪನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, CCTV ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಸ್ಥಳೀಯರು ಹೇಳುವಂತೆ, ಈ ರಸ್ತೆ ಭಾಗದಲ್ಲಿ ಸರಿಯಾದ ಸೂಚನಾ ಫಲಕಗಳು, ರಿಫ್ಲೆಕ್ಟರ್ಗಳು, ಸಿಗ್ನಲ್ ವ್ಯವಸ್ಥೆ ಇಲ್ಲ. ತಿರುವುಗಳಲ್ಲಿ ದೃಷ್ಯಮಾನತೆ ಕಡಿಮೆ ಇರುವುದರಿಂದ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಬೆಳಗ್ಗೆ 6ರಿಂದ ರಾತ್ರಿ 9ರವರೆಗೂ ಭಾರೀ ಟ್ರಾಫಿಕ್ ಇದ್ದರೂ, ಸುರಕ್ಷತಾ ಕ್ರಮಗಳ ಕೊರತೆ ಇದೆ ಎಂಬ ಆರೋಪ ಕೇಳಿಬಂದಿದೆ.
ನಗರದಲ್ಲಿ ಇಂತಹ ರೋಡ್ ರೇಜ್ ಹಾಗೂ ಗುಂಪು ಹಲ್ಲೆಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದು, ಪೊಲೀಸರು ಆರೋಪಿಗಳನ್ನು ಶೀಘ್ರ ಬಂಧಿಸುವ ಭರವಸೆ ನೀಡಿದ್ದಾರೆ.
