ಬೆಂಗಳೂರು:
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 06 (ಕರ್ನಾಟಕ ವಾರ್ತೆ): 2023ರ ಕರ್ನಾಟಕ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮತದಾನ, ಮೇ 10 ರಂದು ನಡೆಯಲಿದ್ದು, 2018ರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ ದಾಖಲಾದ ಮತಗಟ್ಟೆಗಳಲ್ಲಿ ವಿಶೇಷವಾಗಿ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್-SVEEP) ಚಟುವಟಿಕೆಗಳನ್ನು ಮೇ 07 ರಂದು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಎಂ.ಸಿ.ಸಿ ಮತ್ತು ಸ್ವೀಪ್ ನೋಡಲ್ ಅಧಿಕಾರಿ ವರ್ಣಿತ್ ನೇಗಿ ಅವರು ತಿಳಿಸಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ ದಾಖಲಾದ ಮತಗಟ್ಟೆಗಳನ್ನು ಈಗಾಗಲೇ ಗುರುತಿಸಲಾಗಿದ್ದು ಈ ಮತಗಟ್ಟೆಗಳಲ್ಲಿ ಮೇ 10 ರಂದು ನಡೆಯುವ ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಅನೇಕ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಮತದಾನದ ಪ್ರಾಮುಖ್ಯತೆ, ಜಾಗೃತಿ ಮತ್ತು ಅರಿವನ್ನು ಮತದಾರರಲ್ಲಿ ಮೂಡಿಸುವುದರಿಂದ ಮತದಾನದ ಪ್ರಮಾಣ ಹೆಚ್ಚಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಮತದಾರರಿಗೂ ಮತದಾರರ ಮಾರ್ಗದರ್ಶಿ ಮತ್ತು ವೋಟರ್ ಇನ್ಫಾರ್ಮೇಶನ್ ಸ್ಲಿಪ್ ಶೇಕಡ ನೂರರಷ್ಟು ವಿತರಣೆ ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳಲಾಗುವುದು ಇಲ್ಲವಾದಲ್ಲಿ ಕೂಡಲೇ ಕ್ರಮ ವಹಿಸಲಾಗುವುದು.
ಪುನೀತ್ ರಾಜ್‌ಕುಮಾರ್ ಹಾಗೂ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಅವರ ಮತದಾರರ ಜಾಗೃತಿ ಮೂಡಿಸುವ ವಿಡಿಯೋಗಳನ್ನು ಪ್ರದರ್ಶಿಸಲಾಗುವುದು.
ಮತಗಟ್ಟೆಗಳಲ್ಲಿ ಮತದಾರರಿಗೆ ಒದಗಿಸುವ ವಿಶೇಷ ಸೌಲಭ್ಯಗಳಾದ ನೆರಳಿನ ವ್ಯವಸ್ಥೆ, ಶಾಮಿಯಾನ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಶೌಚಾಲಯ, ರ್ಯಾಂಪ್ ಅಂಡ್ ರೈಲಿಂಗ್ಸ್, ಗಾಲಿ ಕುರ್ಚಿ, ಅಗತ್ಯವಿರುವವರಿಗೆ ಉಚಿತ ಸಾರಿಗೆ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಛಾಯಾಚಿತ್ರ ವಿಡಿಯೋ ಚಿತ್ರೀಕರಿಸಿ ಕಡಿಮೆ ಮತದಾನ ದಾಖಲಾದ ಕ್ಷೇತ್ರಗಳಲ್ಲಿ ಮತದಾನದ ದಿನಕ್ಕೆ ಮುಂಚಿತವಾಗಿ ಪ್ರದರ್ಶಿಸಲಾಗುವುದು.
ಮತದಾರರು ಮತದಾನ ಮಾಡುವಂತೆ ಆಕರ್ಷಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ತಲಾ 05 ರಂತೆ 20 ಮಹಿಳಾ(ಸಖಿ) ಮತಗಟ್ಟೆಗಳು, ತಲಾ 01 ರಂತೆ 04 ವಿಕಲಚೇತನ ಮತಗಟ್ಟೆಗಳು, ತಲಾ 01 ರಂತೆ 04 ಯುವಕರ ಮತಗಟ್ಟೆಗಳು, ತಲಾ 01 ರಂತೆ 04 ಎತ್ನಿಕ್ ಮತಗಟ್ಟೆಗಳು ಹಾಗೂ ತಲಾ 01 ರಂತೆ 04 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಎಂ.ಸಿ.ಸಿ ಮತ್ತು ಸ್ವೀಪ್ ನೋಡಲ್ ಅಧಿಕಾರಿ ವರ್ಣಿತ್ ನೇಗಿ ಅವರು ತಿಳಿಸಿದ್ದಾರೆ.