ನವದೆಹಲಿ / ಬೆಂಗಳೂರು, ಡಿ.18: ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ಬೆಂಗಳೂರು ನಗರಕ್ಕೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಬಳಿ ಯಾವುದೇ ಅಂತಿಮ ಪ್ರಸ್ತಾವನೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಲೋಕಸಭೆಯ ಅನ್ಸ್ಟಾರ್ಡ್ ಪ್ರಶ್ನೆ ಸಂಖ್ಯೆ 3078ಕ್ಕೆ ಉತ್ತರ ನೀಡಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್, ಕರ್ನಾಟಕ ಸರ್ಕಾರದ ಮನವಿಯ ಮೇರೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಬೆಂಗಳೂರು ಸಮೀಪದ ಮೂರು ಸ್ಥಳಗಳಲ್ಲಿ ಪ್ರೀ–ಫೀಸಿಬಿಲಿಟಿ ಅಧ್ಯಯನ ನಡೆಸಿದೆ ಎಂದು ತಿಳಿಸಿದರು. ಈ ಅಧ್ಯಯನ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ಗ್ರೀನ್ಫೀಲ್ಡ್ ಏರ್ಪೋರ್ಟ್ ನೀತಿ (GFA Policy) ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಇದುವರೆಗೆ ಯಾವುದೇ ಅಧಿಕೃತ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ ಎಂದು ಹೇಳಿದರು.

ಇದೇ ವೇಳೆ, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮತ್ತು BIAL ನಡುವೆ ನಡೆದಿರುವ ರಿಯಾಯಿತಿ ಒಪ್ಪಂದದ ಪ್ರಕಾರ,
KIA ಕಾರ್ಯಾರಂಭದ 25ನೇ ವರ್ಷದವರೆಗೆ, ಅದರ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಅಥವಾ ಹಾಲಿ HAL ವಿಮಾನ ನಿಲ್ದಾಣವನ್ನು ವಾಣಿಜ್ಯ ಪ್ರಯಾಣಿಕ ಸೇವೆಗೆ ಪುನರಾರಂಭಿಸಲು BIALನ ಸ್ಪಷ್ಟ ಒಪ್ಪಿಗೆ ಅಗತ್ಯ ಎಂದು ಸಚಿವರು ತಿಳಿಸಿದರು.
Also Read: Bengaluru’s Second International Airport Takes Shape: Tenders Open for Feasibility Study, Sites Identified
ಅಂದರೆ, BIALನ ಅನುಮತಿ ಇಲ್ಲದೆ ಬೆಂಗಳೂರು ಸಮೀಪದಲ್ಲಿ ಹೊಸ ವಿಮಾನ ನಿಲ್ದಾಣ ಅಭಿವೃದ್ಧಿ ಅಥವಾ HAL ಏರ್ಪೋರ್ಟ್ ಪುನರಾರಂಭ ಸಾಧ್ಯವಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಬೆಂಗಳೂರು ನಗರದಲ್ಲಿ ಪ್ರಯಾಣಿಕ ಸಂಚಾರ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆ, ಎರಡನೇ ವಿಮಾನ ನಿಲ್ದಾಣದ ಅಗತ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಸಂಸದ ಪಿಸಿ ಮೋಹನ್ ಅವರ ಪ್ರಶ್ನೆಗೆ ದೊರೆತ ಈ ಉತ್ತರವು ಪ್ರಸ್ತುತ ಸ್ಥಿತಿಗತಿಯನ್ನು ಸ್ಪಷ್ಟಪಡಿಸಿದೆ.
