ಜನಗಣತಿ ಅಭಿಯಾನಕ್ಕೆ ಮುನ್ನಡೆ ನೀಡಿದ ಆಯುಕ್ತ ಕೆ ಎನ್ ರಮೇಶ್, ಸ್ವಯಂ ಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದರು
ಬೆಂಗಳೂರು: ರಾಷ್ಟ್ರೀಯ ಜನಗಣತಿ ಕಾರ್ಯವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರು ಹಾಗೂ ಪ್ರಧಾನ ಜನಗಣತಿ ಅಧಿಕಾರಿಗಳಾದ ಕೆ. ಎನ್. ರಮೇಶ್ ಅವರು ಸ್ವತಃ ಸ್ವಯಂ ಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಗಣತಿದಾರರಿಗೆ ಮಾದರಿಯಾಗಿದ್ದಾರೆ.
ಜೆ.ಪಿ. ನಗರದ ಆರ್.ವಿ. ಡೆಂಟಲ್ ಕಾಲೇಜಿನಲ್ಲಿ ನಡೆಯುತ್ತಿರುವ ಜನಗಣತಿ ತರಬೇತಿ ಶಿಬಿರಕ್ಕೆ ಭೇಟಿ ನೀಡಿದ ಆಯುಕ್ತರು, ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಜನಗಣತಿ ಕಾರ್ಯವನ್ನು ಸುಸೂತ್ರವಾಗಿ ನಡೆಸಲು ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.
ತರಬೇತಿ ಕೇಂದ್ರದಲ್ಲಿ ಆಯುಕ್ತರು ಸ್ವತಃ ತಮ್ಮ ವಿವರಗಳನ್ನು ಆನ್ಲೈನ್ನಲ್ಲಿ ದಾಖಲಿಸಿ ‘ಸ್ವಯಂ ಗಣತಿ’ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಇದರಿಂದ ಪ್ರೇರಿತಗೊಂಡ ಗಣತಿದಾರರು ಮತ್ತು ಮೇಲ್ವಿಚಾರಕರು ಸಹ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಒಂದೇ ವೇಳೆ ಸ್ವಯಂ ಗಣತಿಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಗರಿಕರು ಸ್ವತಃ ತಮ್ಮ ಮಾಹಿತಿಯನ್ನು ಆನ್ಲೈನ್ ಮೂಲಕ ದಾಖಲಿಸುವುದರಿಂದ ಸಮಯ ಉಳಿತಾಯವಾಗುವುದರ ಜೊತೆಗೆ ನಿಖರ ಮಾಹಿತಿಯನ್ನು ಸಂಗ್ರಹಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಇದನ್ನು ಉತ್ತೇಜಿಸಲು ಅಧಿಕಾರಿಗಳೇ ಮೊದಲು ಪಾಲ್ಗೊಳ್ಳುವುದು ಅಗತ್ಯವೆಂದು ಅಭಿಪ್ರಾಯಪಟ್ಟರು.
ಗಣತಿದಾರರೊಂದಿಗೆ ಸಂವಾದ:
ತರಬೇತಿ ವೇಳೆ ಗಣತಿದಾರರು ಎದುರಿಸುತ್ತಿರುವ ತಾಂತ್ರಿಕ ಸವಾಲುಗಳು ಮತ್ತು ಕ್ಷೇತ್ರ ಮಟ್ಟದ ಸಮಸ್ಯೆಗಳ ಕುರಿತು ಆಯುಕ್ತರು ಚರ್ಚಿಸಿದರು. ಕೇವಲ ಭಾಷಣಕ್ಕೆ ಸೀಮಿತವಾಗದೆ, ಪ್ರತಿಯೊಬ್ಬರ ಬಳಿ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ ತಕ್ಷಣ ಪರಿಹಾರ ಸೂಚಿಸಿದರು.
ಮೊಬೈಲ್ ಅಪ್ಲಿಕೇಶನ್ ಬಳಕೆ, ದತ್ತಾಂಶ ಸುರಕ್ಷತೆ ಹಾಗೂ ಮನೆ ಗುರುತಿಸುವಿಕೆ ಸಂಬಂಧಿತ ಗೊಂದಲಗಳಿಗೆ ಸ್ಥಳದಲ್ಲೇ ಮಾರ್ಗದರ್ಶನ ನೀಡಿದರು.
ಜನಗಣತಿ ದೇಶದ ಭವಿಷ್ಯದ ಯೋಜನೆಗಳಿಗೆ ಆಧಾರವಾಗಿರುವುದರಿಂದ, ಬೆಂಗಳೂರಿನಂತಹ ಮಹಾನಗರದಲ್ಲಿ ಪ್ರತಿಯೊಂದು ಮನೆಗೂ ತಲುಪುವುದು ದೊಡ್ಡ ಸವಾಲು ಎಂದು ಅವರು ಹೇಳಿದರು. ಬೆಂಗಳೂರು ದಕ್ಷಿಣದ ಪ್ರತಿಯೊಬ್ಬ ನಾಗರಿಕರ ಮಾಹಿತಿ ಸರಿಯಾಗಿ ದಾಖಲಿಸುವುದು ಪ್ರತಿಯೊಬ್ಬ ಗಣತಿದಾರನ ಹೊಣೆಗಾರಿಕೆ ಎಂದು ಅವರು ತಿಳಿಸಿದರು.
ಈ ವೇಳೆ ತರಬೇತಿ ಚಾರ್ಜ್ ಅಧಿಕಾರಿ ಮನು ಗೌಡ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
