Home Uncategorized Bengaluru Tech Summit 2023 | ಬೆಂಗಳೂರು ಟೆಕ್ ಸಮ್ಮಿಟ್‌ – 2023 ರಲ್ಲಿ ಚಂದ್ರಯಾನ-ಇಸ್ರೋ-ಬಾಹ್ಯಾಕಾಶ...

Bengaluru Tech Summit 2023 | ಬೆಂಗಳೂರು ಟೆಕ್ ಸಮ್ಮಿಟ್‌ – 2023 ರಲ್ಲಿ ಚಂದ್ರಯಾನ-ಇಸ್ರೋ-ಬಾಹ್ಯಾಕಾಶ ಉದ್ಯಮದ ಪ್ರದರ್ಶನ ಮಳಿಗೆ

62
0
Bengaluru Tech Summit 2023 to host Chandrayaan-ISRO-Space Industry Pavilion

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಅಸಾಧಾರಣ ಸಾಧನೆಗಳ ಪ್ರದರ್ಶನ ಮತ್ತು ಬಿಟಿಎಸ್‌ ನ (Bengaluru Tech Summit) ಆವಿಷ್ಕಾರ ಹಾಗೂ ಅನ್ವೇಷಣೆಯ ಗುರಿಯನ್ನು ಬಿಂಬಿಸುವ ಅತ್ಯಾಧುನಿಕ ಪ್ರದರ್ಶನ ಮಳಿಗೆ

ಬೆಂಗಳೂರು:

ಪ್ರತಿಷ್ಠಿತ ಹಾಗೂ ನವ ಪ್ರವರ್ತಕ ಎಂದೆನಿಸಿರುವ ವಾರ್ಷಿಕ ಜಾಗತಿಕ ತಂತ್ರಜ್ಞಾನ ಕಾರ್ಯಕ್ರಮ ʼಬೆಂಗಳೂರು ಟೆಕ್‌ ಸಮ್ಮಿಟ್‌ʼ ಮರಳಿ ಬಂದಿದೆ. ಕರ್ನಾಟಕ ಸರ್ಕಾರದಿಂದ ಆಯೋಜನೆಯಾಗಿರುವ ಈ ಸಮ್ಮಿಟ್‌ನಲ್ಲಿ ಈ ವರ್ಷ, ಚಂದ್ರಯಾನ-ಇಸ್ರೋ-ಬಾಹ್ಯಾಕಾಶ ಉದ್ಯಮದ ಪ್ರದರ್ಶನ ಮಳಿಗೆ ಇರಲಿದೆ.

ಏಷ್ಯಾದ ಅತಿದೊಡ್ಡ ಟೆಕ್‌ ಸಮ್ಮಿಟ್‌ ಎಂದು ಹೆಸರಾದ, ʼಬೆಂಗಳೂರು ಟೆಕ್ ಸಮ್ಮಿಟ್‌ʼ ಬೆಂಗಳೂರು ಅರಮನೆ ಮೈದಾನದಲ್ಲಿ ನವೆಂಬರ್‌ 29 ರಿಂದ ಡಿಸೆಂಬರ್‌ 1 ರವರೆಗೆ ನಡೆಯಲಿದೆ.

ಸಮ್ಮಿಟ್‌ನಲ್ಲಿ ನಿರ್ಮಾಣವಾಗಲಿರುವ ಈ ಮಳಿಗೆಯು ಭಾರತದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶನ ಮಾಡುವ ಟೆಕ್‌ ಸಮ್ಮಿಟ್‌ನ ಉದ್ದೇಶಕ್ಕೆ ಪೂರಕವಾಗಿರಲಿದೆ. ಇಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಡೀಪ್‌ಟೆಕ್‌, ಮೆಟಾವರ್ಸ್‌ ಮತ್ತು ವೆಬ್‌ 3.0, ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್ಸ್‌, ಆನಿಮೇಶನ್‌, ವಿಶುವಲ್‌ ಎಫೆಕ್ಟ್‌, ಗೇಮಿಂಗ್‌, ಟೆಲಿಕಾಮ್‌ ಮತ್ತು 6ಜಿ ತಂತ್ರಜ್ಞಾನಗಳ ಮಾಹಿತಿಯನ್ನು ಪ್ರದರ್ಶನ ಮಾಡಲಾಗುತ್ತದೆ. ಈ ಪ್ರದರ್ಶನವು ಟೆಕ್‌ ಸಮ್ಮಿಟ್‌ನ ಈ ವರ್ಷದ ʼಬ್ರೇಕಿಂಗ್‌ ಬೌಂಡರೀಸ್‌ʼ ಎಂಬ ಗುರಿಗೆ ಅನುಗುಣವಾಗಿರಲಿದ್ದು, ಆವಿಷ್ಕಾರ, ಪರಿವರ್ತನೆ ಹಾಗೂ ಅನ್ವೇಷಣೆಯ ಹಾದಿಯಲ್ಲಿ ಸಾಗಲಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೆಚ್ಚಿಸಿಕೊಳ್ಳುತ್ತಿರುವ ಪ್ರಭಾವಕ್ಕೂ ಈ ಪ್ರದರ್ಶನ ಸಾಕ್ಷಿಯಾಗಲಿದೆ. ಜೊತೆಗೆ ಬಾಹ್ಯಾಕಾಶ ಸಂಶೋಧನೆಗೆ ಇಸ್ರೋ ನೀಡುತ್ತಿರುವ ಗಣನೀಯ ಕೊಡುಗೆಗಳ ಪ್ರದರ್ಶನವೂ ಇಲ್ಲಿ ಕಂಡುಬರಲಿದೆ. ನವೋದ್ಯಮಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳು (SME) ಹಾಗೂ ಖಾಸಗಿ ಉದ್ಯಮಗಳು ಚಂದ್ರಯಾನ-3 ಯೋಜನೆಯ ಯಶಸ್ಸಿನಲ್ಲಿ ವಹಿಸಿದ ಪಾತ್ರವನ್ನು ʼಚಂದ್ರಯಾನʼ ಹೆಸರಿನ ಮಳಿಗೆ ಪ್ರದರ್ಶಿಸಲಿದೆ.

ಈ ಪ್ರದರ್ಶನದ ಮೂಲಕ, ಬಾಹ್ಯಾಕಾಶ ಉದ್ಯಮದಲ್ಲಿ ಖಾಸಗಿಯವರ ಹೂಡಿಕೆಗೆ ಉತ್ತೇಜನ ನೀಡುವ ಸರ್ಕಾರದ ಪ್ರಯತ್ನಕ್ಕೆ ಬಿಟಿಎಸ್‌ 2023 ನೆರವಾಗಲಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆ ಮತ್ತು ಆವಿಷ್ಕಾರ ಸಾಧ್ಯವಾಗಲಿದೆ. ಕರ್ನಾಟಕ ಸರ್ಕಾರದ ಪ್ರಸ್ತಾವಿತ ಬಾಹ್ಯಾಕಾಶ ನೀತಿಯು, ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿರಲಿದ್ದು, ಇದು ಬಾಹ್ಯಾಕಾಶ ಆವಿಷ್ಕಾರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ.

ಈ ಕುರಿತು ಮಾತನಾಡಿದ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಐಟಿ ಮತ್ತು ಬಿಟಿ ಸಚಿವರಾದ ಶ್ರೀ ಪ್ರಿಯಾಂಕ್‌ ಖರ್ಗೆ, “ಬಾಹ್ಯಾಕಾಶ ಕ್ಷೇತ್ರದಲ್ಲಿ ನಾವು ಮುಂಚೂಣಿಯಲ್ಲಿದ್ದು ಮಿಂಚುತ್ತಿರುವುದನ್ನು ಚಂದ್ರಯಾನ ಪ್ರದರ್ಶನ ಮಳಿಗೆಯು ಮತ್ತೊಮ್ಮೆ ದೃಢಪಡಿಸಲಿದೆ. ಇದು ಬಾಹ್ಯಾಕಾಶ ಸಂಬಂಧಿತ ಉದ್ಯಮಗಳಲ್ಲಿ ನವೋದ್ಯಮಗಳ ಅಸಾಧಾರಣ ಸಾಮರ್ಥ್ಯ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಯಶಸ್ಸಿನ ಗಾಥೆಯಲ್ಲಿ ನವೋದ್ಯಮಗಳ ಪಾತ್ರವನ್ನು ವಿವರಿಸಲಿದೆ” ಎಂದು ತಿಳಿಸಿದರು.

ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿರುವುದರ ಕುರಿತು ಕೂಡ ಚಂದ್ರಯಾನ ಮಳಿಗೆಯಲ್ಲಿ ಮಾಹಿತಿ ನೀಡಲಾಗುತ್ತದೆ. ಇಸ್ರೋ ಪ್ರಧಾನ ಕಚೇರಿಗೆ ಮತ್ತು ಸಂಬಂಧಿತ ಉದ್ಯಮದ ವಿಶ್ವ ದರ್ಜೆಯ ನವೋದ್ಯಮಗಳಿಗೆ ಬೆಂಗಳೂರು ನೆಲೆಯಾಗಿದ್ದು, ಭಾರತದ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಯ ಲಾಭವನ್ನು ಸ್ವೀಕರಿಸಲು ಅಣಿಯಾಗಿದೆ.

ಬಿಟಿಎಸ್ 2023 ಗೆ 30 ಕ್ಕೂ‌ ಹೆಚ್ಚು ದೇಶಗಳಿಂದ ಸುಮಾರು 400 ಭಾಷಣಕಾರರು ಆಗಮಿಸುವ ನಿರೀಕ್ಷೆ ಇದೆ. ಈ ಭಾಷಣಕಾರರು 75 ಕ್ಕೂ ಹೆಚ್ಚು ಕಾರ್ಯಾಗಾರ/ಸಂವಾದಗಳಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ. 3,000 ಪ್ರತಿನಿಧಿಗಳು ಸೇರಿದಂತೆ ಪಾಲ್ಗೊಳ್ಳುವವರ ಒಟ್ಟು ಸಂಖ್ಯೆ 50,000 ದಾಟುವ ನಿರೀಕ್ಷೆ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ನವೋದ್ಯಮ, ಸಂಶೋಧನಾ ಲ್ಯಾಬ್‌, ಸಣ್ಣ ಮತ್ತು ಮಧ್ಯಮ ಉದ್ಯಮ, ಪ್ರಮುಖ ನಿಗಮಗಳು, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಅಸಾಧಾರಣ ಪ್ರತಿಭೆಗಳನ್ನು ಆಹ್ವಾನಿಸಿ ಇಲ್ಲಿ ಒಂದುಗೂಡಿಸಲು ಸಿದ್ಧತೆ ನಡೆದಿದೆ.

ಮೂರು ದಿನಗಳ ಕಾಲ ನಡೆಯಲಿರುವ ಏಷ್ಯಾದ ಅತಿದೊಡ್ಡ ಟೆಕ್ ಶೃಂಗಸಭೆ ʼಬಿಟಿಎಸ್‌ 2023ʼ ನಲ್ಲಿ ವಿಸ್ತಾರವಾದ ಜ್ಞಾನವನ್ನು ಪಡೆಯಬಹುದಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್, ಡೀಪ್‌ಟೆಕ್, ನವೋದ್ಯಮ ಮತ್ತು ಜೈವಿಕ ತಂತ್ರಜ್ಞಾನ ಕುರಿತಾದ ಸಮ್ಮೇಳನ, ಅಂತಾರಾಷ್ಟ್ರೀಯ ಪ್ರದರ್ಶನ, ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್, ಭಾರತ-ಯುಎಸ್‌ಎ ಟೆಕ್ ಸಭೆ, ಇಂಡಿಯಾ ಇನ್ನೋವೇಶನ್ ಅಲೈಯನ್ಸ್, ಆರ್‌&ಡಿ2ಮಾರ್ಕೆಟ್, ಬಿ2ಬಿ ಸಭೆಗಳು, ಎಸ್‌ಟಿಪಿಐ ಐಟಿ ಎಕ್ಸ್‌ಪೋರ್ಟ್‌ ಪ್ರಶಸ್ತಿ ಪ್ರದಾನ, ಸ್ಮಾರ್ಟ್ ಬಯೋ ಪ್ರಶಸ್ತಿ ಪ್ರದಾನ, ಯುನಿಕಾರ್ನ್ಸ್ ಸನ್ಮಾನ, ಗ್ರಾಮೀಣ ಐಟಿ ರಸಪ್ರಶ್ನೆ, ಜೈವಿಕ ತಂತ್ರಜ್ಞಾನ ರಸಪ್ರಶ್ನೆ, ಬಯೋ ಪೋಸ್ಟರ್‌ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

LEAVE A REPLY

Please enter your comment!
Please enter your name here