ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಫೆಬ್ರವರಿ 27ರಂದು ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿರುವುದು ವರದಿಯಾಗಿದೆ.
ದೆಹಲಿ ಮೂಲದ ಇಲ್ತಾಜ್, ಆರ್.ಟಿ. ನಗರ ಮೂಲದ ಮುನಾವರ್ ಹಾಗೂ ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಅವರನ್ನು ಬಂಧಿಸಿದ್ದಾರೆ. ಸದ್ಯ ಈ ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಬಳಿಕ ನ್ಯಾಯಾಲಕ್ಕೆ ಹಾಜರುಪಡಿಸಲಿದ್ದಾರೆ.
ರಾಜ್ಯಸಭಾ ಸಂಸದ ಸೈಯದ್ ನಾಸೀರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ರಾಜ್ಯ ಸರಕಾರ ಘಟನೆ ನಡೆದ ದೃಶ್ಯಗಳನ್ನು ಎಫ್‌ಎಸ್‌ಎಲ್‌ಗೆ ರವಾನಿಸಿತ್ತು. ಎಫ್‌ಎಸ್‌ಎಲ್ ವರದಿ ದೃಢವಾದ ಹಿನ್ನೆಲೆ ಮೂವರ ಬಂಧನವಾಗಿದೆ ಎನ್ನಲಾಗಿದೆ.
ಸದ್ಯ ಮೂವರು ಆರೋಪಿಗಳನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಪಾಕಿಸ್ತಾನ ಪರ ಘೋಷಣೆ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಡಿ, 26 ಮಂದಿಯ ಪಟ್ಟಿಯನ್ನ ಸಿದ್ದಪಡಿಸಲಾಗಿತ್ತು. ಇದರಲ್ಲಿ 7 ಮಂದಿ ವಿಚಾರಣೆ ಮಾಡಲಾಗಿತ್ತು, ಮೂವರ ವಾಯ್ಸ್ ಸ್ಯಾಂಪಲ್ಸ್ಗಳನ್ನ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿತ್ತು. ಮೆಲುಧ್ವನಿ, ಏರುಧ್ವನಿ ಮಾದರಿಯಲ್ಲಿ ಸ್ಯಾಂಪಲ್ಸ್ಗಳನ್ನ ಸಂಗ್ರಹಿಸಲಾಗಿದ್ದು, ಎಫ್‌ಎಸ್‌ಎಲ್ ತಂಡ ಪರಿಶೀಲನೆ ಮಾಡಿದೆ. ಘಟನೆ ನಡೆದ ದೃಶ್ಯಗಳನ್ನು ಎಫ್‌ಎಸ್‌ಎಲ್‌ಗೆ ರವಾನಿಸಲಾಗಿತ್ತು.
ಸರ್ಕಾರ ಕೂಡ ಕಟ್ಟುನಿಟ್ಟಿನ ತನಿಖೆಗೆ ಮುಂದಾಗಿದ್ದು, ಎಫ್‌ಎಸ್‌ಎಲ್ ಮೇಲೆ ಇಡೀ ಪ್ರಕರಣವೇ ನಿಂತಿದೆ. ಸರ್ಕಾರ ಇನ್ನು ಎಫ್‌ಎಸ್‌ಎಲ್ ವರದಿ ಬಂದಿಲ್ಲ ಅಂತಿದ್ದರೆ, ಇತ್ತ ಬಿಜೆಪಿ ನಾಯಕರು ಮಾತ್ರ ನಿನ್ನೆಯೇ ವರದಿ ಬಂದಿದೆ ಎಂದು ಗಂಭೀರ ಆರೋಪ ಮಾಡಿದ್ದರು
ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಎಫ್‌ಎಸ್‌ಎಲ್ ವರದಿ ಕಾಂಗ್ರೆಸ್ ಕೈ ಸೇರಿದೆ. ಆದರೆ ಬಿಡುಗಡೆ ಮಾಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.