ಬೆಂಗಳೂರು:
ಕುಮಾರಪಾರ್ಕ್ ಬಳಿ 3 ಬೀದಿ ನಾಯಿಗಳು ನಿಗೂಢವಾಗಿ ಕಣ್ಮರೆಯಾಗಿರುವ ಕೇಸ್ಗೆ ಸಂಬಂಧಿಸಿದಂತೆ ಅವುಗಳನ್ನು ಹುಡುಕಿಕೊಟ್ಟವರಿಗೆ 35,000 ರೂಪಾಯಿಗಳ ನಗದು ಬಹುಮಾನ ಘೋಷಣೆ ಮಾಡಲಾಗಿದೆ.
ಒಂದು ನಾಯಿಯನ್ನು ಹುಡುಕಿ ಕೊಟ್ಟರೇ 10 ಸಾವಿರ ರೂ.ಗಳನ್ನು ಅದರಂತೆ 3 ನಾಯಿಗಳನ್ನು ಒಂದೇ ಬಾರಿಗೆ ಹುಡುಕಿಕೊಟ್ಟರೇ ಇನ್ನು 5 ಸಾವಿರ ರೂ.ಗಳನ್ನು ಸೇರಿಸಿ ಒಟ್ಟು 35 ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.
ಕಾಣೆಯಾಗಿರುವ ಲೋಬಿ, ದಂತ, ರಿಬಾ ಎನ್ನುವ ಶ್ವಾನಗಳ ಪತ್ತೆಗೆ 4 ತಂಡಗಳು ಶೋಧ ಕಾರ್ಯ ಕೈಗೊಂಡಿವೆ. ಸದ್ಯ ಯುಕೆಯಲ್ಲಿರುವ ವಿಪ್ಲವಿ ಮಹೇಂದ್ರ ಅವರು ಸಂಪರ್ಕ ಮಾಡಿ ಬೆಂಗಳೂರಿನಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ.
ಒಂದೊಂದು ತಂಡದಲ್ಲಿ ಇಬ್ಬರು ವ್ಯಕ್ತಿಗಳಿಂದ ಬೆಂಗಳೂರಿನ ಹಲವು ಕಡೆ ಹುಡುಕಾಡಲಾಗುತ್ತಿದೆ. ಮೆಜೆಸ್ಟಿಕ್, ಗೂಡ್ಸ್ ಶೆಡ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಬಾಸಾಪುರ ಸೇರಿದಂತೆ ಹಲವೆಡೆ ನಿತ್ಯ 11 ಗಂಟೆಗಳ ಕಾಲ ನಾಯಿಗಳಿಗಾಗಿ ಹುಡುಕಾಟ ಮಾಡಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಾಯಿಗಳಿವೆ ಎಂದು ಕೆಲವರು ಫೋಟೋ ಕಳಿಸಿದ್ದರಿಂದ ಅಲ್ಲಿಯು ಶೋಧ ಕಾರ್ಯ ಮುಂದುವರೆದಿದೆ.
ವಿಪ್ಲವಿ ಮಹೇಂದ್ರ ಅವರು ಲೋಬಿ, ದಂತ, ರಿಬಾ ಎನ್ನುವ ಶ್ವಾನಗಳನ್ನು ಕಳೆದ 10 ವರ್ಷಗಳಿಂದ ನೋಡಿಕೊಳ್ಳುತ್ತಿದ್ದರು. ಇವರು ವಿದೇಶಕ್ಕೆ ಹೋದ ಮೇಲೆ ಕಚೇರಿ ಸಿಬ್ಬಂದಿ ಅವುಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಅಕ್ಟೋಬರ್ 4 ರಿಂದ 20 ನಡುವೆ ಮೂರು ಶ್ವಾನಗಳು ನಿಗೂಢವಾಗಿ ಕಣ್ಮರೆಯಾಗಿದ್ದವು. ಇದರಿಂದ ಬೇಸರ ವ್ಯಕ್ತಪಡಿಸಿದ್ದ ಸಿಬ್ಬಂದಿ ಅವುಗಳನ್ನ ಏರಿಯಾದಲ್ಲೆಲ್ಲ ಹುಡುಕಿದರು ಸಿಕ್ಕಿರಲಿಲ್ಲ. ಹೀಗಾಗಿ ನವೆಂಬರ್ 02 ರಂದು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರಿಂದ ಪೊಲೀಸರು ಕೂಡ ಅವುಗಳನ್ನ ಹುಡುಕುತ್ತಿದ್ದಾರೆ.